ಶ್ರೀ ಕಬ್ಬಾಳಮ್ಮ ದೇವಸ್ಥಾನ
ಕಬ್ಬಾಳು ಪುನ್ಯಕ್ಷೇತ್ರ
ಶ್ರೀ ಕಬ್ಬಾಳಮ್ಮ ದೇವಸ್ಥಾನಾ
ಶ್ರೀ ಕಬ್ಬಾಳಮ್ಮ ವಿಗ್ರಹವನ್ನು ಆರಾಧಿಸಲಾಗುತ್ತಿದೆ. ಲಕ್ಷಾಂತರ ಭಕ್ತಾದಿಗಳು ಪೂಜೆ ಸಲ್ಲಿಸಲು ಪ್ರತಿ ವರ್ಷ ಬರುತ್ತಾರೆ.
ಶ್ರೀ ಕಬ್ಬಾಳಮ್ಮ ದೇವಿ ಕಬ್ಬಾಳು ಕ್ಷೇತ್ರ
ಮಹಾವೀರನ ನಿರ್ವಾಣದ ನಂತರ ಗೌತಮಗಣಧಾರನೇ ಮೊದಲಾದ ಅನೇಕ ಋಷಿಗಳು ಜೈನ ಗುರುಗಳಾಗಿದ್ದು, ಅವರಲ್ಲಿ ಒಬ್ಬನಾದ ಭದ್ರಬಾಹು ಸ್ವಾಮಿಯು ಉಜ್ಜಯಿನಿಯಲ್ಲಿದ್ದಾಗ ಹನ್ನೆರಡು ವರ್ಷ ಬರಗಾಲ ದೇಶವನ್ನು ಕ್ಷೋಬೆಗೆ ಒಳಪಡಿಸುತ್ತದೆ. ಎಂಬ ಭವಿಷ್ಯ ವಾಣಿಯನ್ನು ನುಡಿದುದರ ಪರಿಣಾಮವಾಗಿ ಸಂಪೂರ್ಣ ಸಂಘವು ಉತ್ತರಾಪಥದಿಂದ ದಕ್ಷಿಣಪಥಕ್ಕೆ ವಲಸೆ ಬಂದು ಕ್ರಮೇಣ ನೂರಾರು ಜನಪದಗಳನ್ನು ಗ್ರಾಮಗಳನ್ನು ಸಂತೋಷದಿಂದಿದ್ದ ಜನಧನಕನಕಸಸ್ಯ ಗೋಮಹಿಷಜಾವಿಕುಚವನ್ನು ಒಳಗೊಂಡ ದೇಶವೊಂದಕ್ಕೆ ಬಂದಿತೆಂದೂ ಹೇಳಲಾಗಿದೆ. ಹೀಗೆ ದಕ್ಷಿಣ ಪಥಕ್ಕೆ ವಲಸೆ ಬಂದು ಅನೇಕ ಜೈನ ಗುರು ಮುನಿ ಸನ್ಯಾಸಿಗಳು ಕಟವಪ್ರ (ಶ್ರವಣಬೆಳಗೊಳ), ತಿಪ್ಪೂರು (ಮದ್ದೂರು ತಾಲ್ಲೂಕು) ಹಾಗೂ ನಿಂಬ ಗ್ರಾಮ (ಚನ್ನಪಟ್ಟಣ ತಾಲ್ಲೂಕು) ಗೊಮ್ಮಟಗಿರಿ(ಮೈಸೂರು ತಾಲ್ಲೂಕು) ಕನಕಗಿರಿ (ಚಾಮರಾಜನಗರ ತಾಲ್ಲೂಕು) ಮುಂತಾದ ಪ್ರದೇಶಗಳಿಗೆ ಹೋದ ಹಾಗೇ ಕನಕಪುರ ತಾಲ್ಲೂಕಿನ ಕಬ್ಬಾಳು ದುರ್ಗಕ್ಕೆ ಬಂದು ತಮ್ಮ ತಮ್ಮ ಶ್ರೇಣಿಗೆ ತಕ್ಕಂತೆ ತಪಸ್ಸನ್ನು ಆಚರಿಸುತ್ತಿದ್ದರು. ಅವರು ಈ ಕಬ್ಬಾಳು ಬೆಟ್ಟವನ್ನು ಹತ್ತಲು ಪಡುತ್ತಿದ್ದ ಶ್ರಮವನ್ನು ಕಂಡು ಕರ್ನಾಟಕದಲ್ಲಿ ಜೈನ ಧರ್ಮವು ಅಭಿವೃದ್ದಿ ಹೊಂದುತ್ತಿದ್ದ ಕಾಲದಲ್ಲಿ ಅಂದರೆ ಸುಮಾರು ಕ್ರಿ.ಶ. 900 ರಿಂದ 1100 ದ ಒಳಗೆ ಈ ಕಬ್ಬಾಳು ಬೆಟ್ಟಕ್ಕೆ ಗಂಗ ರಾಜ ಅಥವಾ ಅವನ ಮಕ್ಕಳು ಈ ಬೆಟ್ಟವನ್ನು ಹತ್ತಿ ತುದಿ ಮುಟ್ಟಲು, ಮೆಟ್ಟಲುಗಳನ್ನು ಕಡಿದಾದ ಬಂಡೆಯಲ್ಲಿಯೇ ಕೂರಿಸಿರುತ್ತಾರೆ. ಅಲ್ಲದೇ ಜೈನ ಮುನಿಗಳಿಗೆ ಅನುಕೂಲವಾಗುವಂತೆ ಬೆಟ್ಟದ ಮೇಲೆ ನೀರಿನ ಹೊಂಡವನ್ನು ಹಾಗೂ ಸಣ್ಣ ಮಂಟಪದಂತಿರುವ ಒಂದು ಆಶ್ರಯ ತಾಣವನ್ನು ನಿರ್ಮಿಸಿಕೊಡಲಾಯಿತು. ಮುಂದೆ ಹೊಯ್ಸಳರ ಆಳ್ವಿಕೆಯ ನಂತರದ ಕಾಲದಲ್ಲಿ ಈ ಬೆಟ್ಟ ಪ್ರದೇಶಕ್ಕೆ ಸುಮಾರಾದ ಕೋಟೆಯನ್ನು ನಿರ್ಮಿಸಲಾಯಿತೆಂದೂ ತಿಳಿಯಬಹುದು.
ಶ್ರೀ ಕಬ್ಬಾಳಮ್ಮ ದೇವಿ ಕಬ್ಬಾಳು ಕ್ಷೇತ್ರ
ಕಬ್ಬಾಳು ಗ್ರಾಮವು ಸಾತನೂರು ಹೋಬಳಿ ಕನಕಪುರ ತಾಲ್ಲೂಕು ರಾಮನಗರ ಜಿಲ್ಲೆ (ಹಿಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆ)ಗೆ ಸೇರಿದ್ದಾಗಿದೆ. ಈ ಗ್ರಾಮವು ಬೆಟ್ಟ ಗುಡ್ಡಗಳ ನಡುವೆ ಕುಳಿಯಂತೆ ಕಾಣುವ ಸಮತಟ್ಟಿನ ಪ್ರದೇಶವನ್ನು ಕಬ್ಬಾಳು ಕುಳಿ - ಎಂಬುದಾಗಿ ಗುರ್ತಿಸುತ್ತಾರೆ. ಕಬ್ಬಾಳು, ಕಂಸಾಗರ, ಅತ್ತಿಹಳ್ಳಿ, ಹೊಸಳ್ಳಿ, ವಡೇರಹಳ್ಳಿಗೇರಳ್ಳಿ, ಅರೆಕಟ್ಟೆದೊಡ್ಡಿ, ದಾಳಿಂಬ ಇನ್ನೂ ಕೆಲವು ಹಳ್ಳಿಗಳು ಈ ಕುಳಿಯಲ್ಲಿವೆ. ಈ ಕುಳಿಗೆ ಮೆರಗು ನೀಡುವಂತಹ ಕಬ್ಬಾಳು ಬೆಟ್ಟ, ಗೇರಳ್ಳಿಬೆಟ್ಟ, ತೈಲೂರುಕಲ್ಲು, ಮತ್ತು ಕುರುಚಿ ಅಚ್ಚಲು ಬೆಟ್ಟಗಳಿವೆ. ಕಬ್ಬಾಳು ಗ್ರಾಮದ ಪಶ್ಚಿಮದಲ್ಲಿರುವ ಕಬ್ಬಾಳು ದುರ್ಗ ಸಾಕಷ್ಟು ಎತ್ತರವಿರುವುದರಿಂದ ಈ ಬೆಟ್ಟದ ಮೇಲಿಂದ ಕಾಣುವ ದೃಶ್ಯಗಳು ನಯನ ಮನೋಹರವಾಗಿದೆ. ಬೆಟ್ಟದ ಕೆಳಗೆ ಈಶಾನ್ಯ ಭಾಗದಲ್ಲಿ ಕಬ್ಬಾಳೂ ಗ್ರಾಮವಿದೆ. ಹಳೇಕಬ್ಬಾಳು ಮತ್ತು ಹೊಸಕಬ್ಬಾಳು ಗ್ರಾವiಗಳು ಅಕ್ಕಪಕ್ಕದಲ್ಲಿದ್ದರೂ ದೇವಾಲಯವಿರುವುದು ಹಳೆಯ ಕಬ್ಬಾಳು ಗ್ರಾಮದಲ್ಲಿ ಮತ್ತು ಬೆಟ್ಟದ ಸಾಲನ್ನು ಭೀಮನ ಬೆಟ್ಟಗಳೆಂದು ಕರೆಯುತ್ತಾರೆ.
ಕಬ್ಬಾಳು ಗ್ರಾಮವು ಮತ್ತು ಗ್ರಾಮದೇವತೆ ಕಬ್ಬಾಳಮ್ಮ – ಕಾಳಿಕಾದೇವಿ ಪೂರ್ವಾಭಿಮುಖವಾಗಿದ್ದು ದೇವಾಲಯದ ಪಶ್ಚಿಮದಲ್ಲಿ ಕಬ್ಬಾಳು ದುರ್ಗವಿದ್ದು ಸಮುದ್ರ ಮಟ್ಟದಿಂದ 1069 ಮೀಟರ್ ಎತ್ತರದಲ್ಲಿರುವ ಶಂಖಾಕೃತಿಯ ಈ ಗಿರಿದುರ್ಗ ಇತಿಹಾಸ ಪ್ರಸಿದ್ದವಾಗಿದ್ದಾಗಿದೆ. ದೇವಾಲಯದ ಈಶಾನ್ಯ ಭಾಗದಲ್ಲಿ ಕಲ್ಯಾಣಿಯೂ ಆ ಕಲ್ಯಾಣಿಯ ಪಕ್ಕದಲ್ಲಿ ಒಂದು ಕೆರೆಯೂ ಇದ್ದು ಇದನ್ನು ಚೌಳಿಕಟ್ಟೆ ಎನ್ನುತ್ತಾರೆ. ದೇವಾಲಯದ ದಕ್ಷಿಣ ಭಾಗದಲ್ಲಿ ಕಬ್ಬಾಳು ಗ್ರಾಮವು ಬೆಳೆದಿದ್ದು ಉತ್ತರದಿಕ್ಕಿನಲ್ಲಿ ದೇವಾಲಯಕ್ಕೆ ಸೇರಿದ ಖಾಲಿ ಜಾಗವಿರುತ್ತದೆ. ಈ ಗ್ರಾಮದಲ್ಲಿ ಎಲ್ಲಾ ಕೋಮಿನವರು ವಾಸವಿದ್ದು ವ್ಯವಸಾಯ ಪ್ರಧಾನ ಉದ್ಯೋಗವಾಗಿರುತ್ತದೆ. ರಾಗಿ, ಭತ್ತ, ಅವರೆ, ಹುರಳಿ, ಕಡಲೆಕಾಯಿ, ಇನ್ನೂ ಮುಂತಾದ ಧಾನ್ಯಗಳನ್ನು ಬೆಳೆಯುವುದಲ್ಲದೆ, ಇದೀಗ ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದ ಹಿಪ್ಪು ನೇರಳೆ ಬೆಳೆಯನ್ನು ಬೆಳೆದು ರೇಷ್ಮೆ ಗೂಡುಗಳಿಂದ ರೇಷ್ಮೆ ತಯಾರಿಸುವ ಉದ್ಯೋಗದಲ್ಲಿ ಹಲವರು ನಿರತರಾಗಿದ್ದಾರೆ.
ಕಬ್ಬಾಳು ತಲುಪಲು ಬೆಂಗಳೂರು ಮೈಸೂರು ಮಂಡ್ಯ ಕೊಳ್ಳೇಗಾಲಗಳಿಂದ ಬಸ್ ಸೌಕರ್ಯಗಳಿವೆ. ಬೆಂಗಳೂರಿನಿಂದ ಚನ್ನಪಟ್ಟಣ ತಲುಪಿ ಅಲ್ಲಿಂದ ಕಬ್ಬಾಳಿಗೆ ಬರುವುದು. ಇದು ಒಂದು ಮಾರ್ಗವಾದರೆ ಕನಕಪುರ ಮಾರ್ಗವಾಗಿ ಸಾತನೂರಿಗೆ ಬಂದು ಕಬ್ಬಾಳ ತಲುಪುವುದು ಇನ್ನೊಂದು ಮಾರ್ಗ ಬೆಂಗಳೂರಿನಿಂದ ಕಬ್ಬಾಳಿಗೆ ನೇರ ಬಸ್ ಸೌಕರ್ಯವಿದೆ. ಮೈಸೂರು ಮಂಡ್ಯ ರಾಮನಗರ ಮತ್ತು ಬೆಂಗಳೂರು ನಗರದಿಂದ ರೈಲು ಮಾರ್ಗವಾಗಿ ಕಬ್ಬಾಳನ್ನು ತಲುಪಬಹುದು. ಬೆಳ್ಳಗ್ಗೆ 6 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ಚನ್ನಪಟ್ಟಣ ಅಥವಾ ಕನಕಪುರ ಮಾರ್ಗವಾಗಿ 80 ಕಿ.ಮೀ ಚನ್ನಪಟ್ಟಣದಿಂದ 21 ಕಿ.ಮೀ ಅಂತೆಯೇ ಸಾತನೂರಿನಿಂದ 6 ಕಿ.ಮೀ ದೂರದಲ್ಲಿದೆ.
ಕಬ್ಬಾಳು ದುರ್ಗದ ಇತಿಹಾಸ ಗಂಗ, ಹೊಯ್ಸಳರ ಕಾಲದಿಂದಲೂ ಪ್ರಸಿದ್ದವಾಗಿದ್ದು ಕಬ್ಬ ಹಾಳು ಎಂಬ ಹೆಸರಿನಲ್ಲಿ ಅದರ ಉಲ್ಲೇಖ ಕಾಣುತ್ತದೆ. ದುರ್ಗದ ತಪ್ಪಲಿನ ಹಳ್ಳಿಯಲ್ಲಿ ಕಾಳಿಕಾದೇವಿಯನ್ನು ಕಬ್ಬಾಳಮ್ಮ ಎಂಬ ಹೆಸರಿನಿಂದ ಕರೆಯುವ ಗ್ರಾಮದೇವತೆಯ ದೇವಾಲಯವಿದೆ. ಕಬ್ಬಾಳಮ್ಮ ಎನ್ನುವುದು ವಿಜಯನಗರ ಕಾಲೀನ ಶಾಸನದಲ್ಲಿ ಕಾಳಿಕಾದೇವಿ ಎಂದು ಕಂಬಗಳಿಂದ ಕೂಡಿದ ವಿಜಯನಗರ ಶೈಲಿಯ ಸಾಮಾನ್ಯ ರಚನೆ, ಗರ್ಭಗೃಹದ ಮೇಲಿನ ಶಿಖರ ಇಟ್ಟಿಗೆ ಗಾರೆ ಕೆಲಸದ ಈಚಿನ ಕಾಲದ ರಚನೆ, ಕಬ್ಬಾಳಮ್ಮನ ಗುಡಿಯ ಉತ್ತರದಲ್ಲಿ ಒಂದು ಭೈರವನ ಗುಡಿಯೂ ಇದ್ದು ಅದಕ್ಕೆ ಕೆಂಚಣ್ಣ ಮತ್ತು ಕರಿಯಣ್ಣ ಎಂದು ಕರೆಯುವ ಎರಡು ಮುಖಗಳಿವೆ. ಒಂದು ಪ್ರಾಕಾರವೂ ಒಂದು ಮುಖ ಮಂಟಪವೂ ಇದೆ. ಎತ್ತರದ ದುರ್ಗದಲ್ಲಿ ಕೂಡ ಹಳೆಯದಾದ ಒಂದು ಭೀಮೇಶ್ವರ ಗುಡಿಯೂ, ಕೊಳವೂ, ಧಾನ್ಯದ ಹಗೇವೂ ಇವೆ. ಬೆಟ್ಟದ ನಡು ಭಾಗದಲ್ಲಿ ಚಿಕ್ಕ ಶ್ರೀನಿವಾಸ ಮೂರ್ತಿ ಇರುವ ಗವಿಯೇ ಗುಡಿಯಾಗಿರುವ ಒಂದು ದೇಮಾಲಯವಿದೆ. ಈ ದೇವಾಲಯದ ಆವರಣದಲ್ಲಿ ಎರಡು ದೊಣೆಗಳಿವೆ. ಬೆಟ್ಟದ ತುದಿಯಲ್ಲಿ ಒಂದು ದೊಣೆಯಿದೆ. ಬೆಟ್ಟದ ಸುತ್ತಲೂ ಕೋಟೆ ಉಂಟು.
ಬೆಟ್ಟದ ಬುಡದ ಪ್ರದೇಶವನ್ನು ಕೋಟೋಶ್ವರ ಕಟ್ಟೆ ಎಂದೂ ನಾಲ್ಕೂ ಗೋಡೆಗಳ ಕಲ್ಲು ಹಾಸುಗಳ ಪ್ರವೇಶದ್ವಾರ, ಗೊಲ್ಲರ ಬಾಗಿಲು, ತೊಟ್ಟಿಲು ಆಕಾರದ ಮೆಟ್ಟಲುಗಳ ತೊಟ್ಟಿ ಕಲ್ಲು ದುರ್ಗದ ಮೇಲ್ಬಾಗದಲ್ಲಿ ಶಿಥಿಲವಾದ ಸ್ಮಾರಕಗಳ ನಡುವೆ ದೊಡ್ಡದಾದ ಒಂದು ರಾಗಿಯ ಕಣಜ. ದಕ್ಷಿಣದ ತುದಿಯಲ್ಲಿ ಹೆಣ ತಳ್ಳುವ ಮೂಲೆ ಇವೆಲ್ಲ ಅಲ್ಲಿಯ ವಾಸ್ತು ವಿಶೇಷಗಳು. ಬೆಟ್ಟದ ಮೇಳಿನ ಹರಿವಿನಲ್ಲಿ ಪಶ್ಚಿಮದ ತುದಿಯಲ್ಲಿ ಪಾಳೇಯಗಾರರದೆಂದು ಹೇಳಲಾಗುವ ಅರಮನೆಯೊಂದರ ಅವಶೇಷಗಳಿವೆ. ಆ ಅವಶೇಷಗಳ ಈಶಾನ್ಯಕ್ಕೆ ಸರೋವರದ, ಆಗ್ನೇಯ ಮೂಲೆಯಲ್ಲಿ ಕಬ್ಬಾಳಮ್ಮನ (ಕಾಳಿಕಾದೇವಿ) ಶೀಲ್ಪದ ಹಾಸುಗಲ್ಲು ಭಿನ್ನವಾಗಿ ಬಿದ್ದಿದೆ. ಅರಮನೆಯ ಅವಶೇಷಗಳ ನೈಋತ್ಯ ದಿಕ್ಕಿನಲ್ಲಿ ಮದ್ದಿನ ಮನೆ ಉಂಟು.
ಶ್ರೀ ಗಣಪತಿ ದೇವಸ್ಥಾನ
ಮುಖ್ಯ ದೇವಸ್ಥಾನದಲ್ಲಿ, ಶ್ರೀ ಮಹಾಗಣಪತಿಗೆ ಪೂಜಿಸಲಾಗುತ್ತದೆ. ಶ್ಶ್ರೀ ಮಹಾಗಣಪತಿ ಮೂರ್ತಿಯು ಶ್ರೀ ಕಬ್ಬಾಳಮ್ಮ ದೇವಿಯ ಎಡಭಾಗದಲ್ಲಿ ಇದೆ
ಶ್ರೀ ಕಬ್ಬಾಳಮ್ಮ ದೇವಿಯ ವಿಗ್ರಹ
ಶ್ರೀ ಕಬ್ಬಾಳಮ್ಮ ದೇವಿಯ ಹಳೆಯ ವಿಗ್ರಹವನ್ನು ಗಾಜಿನ ಪೆಟ್ಟಿಗೆಯಲ್ಲಿ ಸಂರಕ್ಷಿಸಲಾಗಿದೆ. ಇದು ಮುಖ್ಯ ವಿಗ್ರಹದ ಹಿಂದೆ ನಿಖರವಾಗಿ ಇದೆ.
ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ
ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮೂರ್ತಿಯು ದೇವಾಲಯದ ಒಳಗಡೆ ಶ್ರೀ ಕಬ್ಬಾಳಮ್ಮ ದೇವಿಯ ಬಲಭಾಗದಲ್ಲಿ ಇದೆ
ಕಬ್ಬಾಳು ದುರ್ಗ
ಪ್ರತಿವರ್ಷ ಲಕ್ಷಾಂತರ ಭಕ್ತಾದಿಗಳು ಶ್ರೀ ಕಬ್ಬಾಳಮ್ಮ ದೇವಿಯನ್ನು ಪೂಜಿಸಲು ಕಬ್ಬಾಳು ದುರ್ಗಕ್ಕೆ ಆಗಮಿಸುತ್ತಾರೆ. ಭಕ್ತಾದಿಗಳು ಬೆಟ್ಟದ ಮೇಲಿರುವ ಮೂಲ ದೇವಸ್ಥಾನವನ್ನು ಕಾಣಬಹುದು. ದುರ್ಗದ ಕೋಟೆಯನ್ನು ಈಗಲೂ ಕಾಣಬಹುದು. ಬೆಟ್ಟದ ಮೇಲೆ ಕಲ್ಯಾಣಿ ಹಾಗೂ ಪೂರ್ವಭಾಗದಲ್ಲಿ ದೇವಿ ಗುಡಿಯು ಈಗಲೂ ಕಾಣಬಹುದು.
ಶ್ರೀ ಕಬ್ಬಾಳಮ್ಮ ದೇವಸ್ಥಾನದ ಪಕ್ಕದಲ್ಲಿರುವ ಶ್ರೀ ಬಸವಣ್ಣ ದೇವಾಲಯದಲ್ಲಿ ಭಕ್ತಾದಿಗಳು ಸೇವೆ ಸಲ್ಲಿಸಬಹುದು.
ಶ್ರೀ ಕಬ್ಬಾಳು ಜಾತ್ರೆ ಪ್ರತಿ ವರ್ಷ ಮಾಘ ಮಾಸದ ಕೊನೆಯ ವಾರದಲ್ಲಿ ಆಚರಿಸಲಾಗುತ್ತದೆ
- ಶುಕ್ರವಾರ, ಜಾತ್ರೆಯ 1 ನೇ ದಿನ
- ಶನಿವಾರ, ಜಾತ್ರೆಯ 2 ನೇ ದಿನ
- ಭಾನುವಾರ, ಜಾತ್ರೆಯ 3 ನೇ ದಿನ
- ಸೋಮವಾರ, ಜಾತ್ರೆಯ 4 ನೇ ದಿನ
- ಮಂಗಳವಾರ, ಜಾತ್ರೆಯ 5 ನೇ ದಿನ
- ಬುಧವಾರ, ಜಾತ್ರೆಯ 6 ನೇ ದಿನ
- ಗುರುವಾರ, ಜಾತ್ರೆಯ 7 ನೇ ದಿನ
- ಶುಕ್ರವಾರ, ಜಾತ್ರೆಯ 8 ನೇ ದಿನ