ಶ್ರೀ ಕಬ್ಬಾಳಮ್ಮ ದೇವಸ್ಥಾನಾ

ಇತಿಹಾಸ


ಇತಿಹಾಸ

ಚನ್ನಪಟ್ಟಣದ ಜಗದೇವರಾಯ
ಚನ್ನಪಟ್ಟಣದ ಜಗದೇವರಾಯನು ಪೆನುಗೊಂಡೆಯಲ್ಲಿ ಆಳುತ್ತಿದ್ದ ಅರವೀಡು ಮನೆತನದ ತಿಮ್ಮರಾಜನ ಮಾವ ಕ್ರಿ.ಶ.1577 ರಲ್ಲಿ ಬಿಜಾಪುರ ಮತ್ತು ಅಹವiದ್ ನಗರದ ಸುಲ್ತಾನರು ಪೆನುಗೊಂಡೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ತಿಮ್ಮರಾಜನು ತನ್ನ ರಾಜಧಾನಿಯನ್ನು ಚಂದ್ರಗಿರಿಗೆ ವರ್ಗಾಯಿಸಿದ್ದ. ಇದರಿಂದಾಗಿ ಆಕ್ರಮಣವನ್ನು ಎದುರಿಸುವ ಜವಾಬ್ದಾರಿ ಜಗದೇವರಾಯನ ಪಾಳಿಗೆ ಬಂತು. ಹುಟ್ಟೂ ಸಾಹಸಿಯೂ ವೀರ ಯೋಧನೂ ಆದ ಜಗದೇವರಾಯ, ಬಿಜಾಪುರದ ಸೇವೆಯನ್ನು ಹಿಮ್ಮೆಟ್ಟಿಸಿ ಪೆನುಗೊಂಡೆಯನ್ನು ವಿಪತ್ತಿನಿಂದ ಪಾರು ಮಾಡಿದ. ಇದರಿಂದ ಮೂರನೇಯ ಪೆನುಗೊಂಡದ ಯುದ್ದದಲ್ಲಿ ಅಸಾಧಾರಣ ಶೌರ್ಯ ಪ್ರದರ್ಶಿಸಿದ ಜಗದೇವರಾಯನು ಸೇವೆಯನ್ನು ಮೆಚ್ಚಿ ವಿಜಯನಗರದ ಶ್ರೀರಂಗರಾಯ ಇವನಿಗೆ ಘನಗಿರಿರಕ್ಷಕ ಎಂಬ ಬಿರುದನ್ನು, ಒಂಭತ್ತು ಲಕ್ಷ ಪಗೋಡಗಳ ವರಮಾನವುಳ್ಳ ದೊಡ್ಡ ಪ್ರದೇಶವನ್ನು ಜಗದೇವರಾಯನಿಗೆ ಕೊಟ್ಟ. ಈ ಪ್ರದೇಶ ಬಾರಾಮಹಲ್ ನಿಂದ ಪಶ್ಚಿಮ ಘಟ್ಟಗಳವರೆಗೆ ವ್ಯಾಪಿಸಿದ್ದು ಮುಳಬಾಗಿಲು, ಪಿರಿಯಾಪಟ್ಟಣ, ಕಾನಕಾಹಳ್ಳಿ ಮತ್ತು ಬೂದಿಹಾಳು ಸೀಮೆಗಳು ಸೇರಿದ್ದವು. ಹೊಸದಾಗಿ ಪಡೆದ ಈ ದೊಡ್ಡ ರಾಜ್ಯದ ವ್ಯವಸ್ಥೆಗೆ ಅನುಕೂಲವಾಗಿರಲು ಈ ಪ್ರದೇಶದ ಕೇಂದ್ರದಲ್ಲಿದ್ದ ಚಂದಪಟ್ಟಣವನ್ನು ರಾಜಧಾನಿಯಾಗಿ ಮಾಡಿಕೊಂಡು ಸುಮಾರು ಕ್ರಿ.ಶ 1580 ರಲ್ಲಿ ಕೋಟೆ ಕಟ್ಟಿಸಿದ. ನಂತರ ಅದಕ್ಕೆ ಚನ್ನಪಟ್ಟಣವೆಂದು ಹೆಸರು ಇಟ್ಟನು. ಅಲ್ಲದೇ ಶ್ರೀ ರಂಗರಾಯನು ತನ್ನ ಮಗಳನ್ನೂ ಕೊಟ್ಟು ಮದುವೆ ಮಾಡಿದನಂತೆ.

ಮುಂದೆ ಪೆದ್ದಜಗದೇವರಾಯನು ಈ ಪ್ರದೇಶಗಳ ಅಭಿವೃದ್ದಿಯ ಕಡೆ ಗಮನಹರಿಸಿದನು. ತನ್ನ ರಾಜಧಾನಿ ಚನ್ನಪಟ್ಟಣಕ್ಕೆ ಹತ್ತಿರವಿದ್ದ ಕಬ್ಬಾಳ ಬೆಟ್ಟದ ಮೇಲಿನ ಕೋಟೆಯನ್ನು ಪುನರ್ ನಿರ್ಮಾಣ ಮಾಡಿ ಧೃಢಕಾಯವಾಗಿಸುವ ಕೆಲಸ, ಬಹುಶಃ ಚನ್ನಪಟ್ಟಣದ ಪಾಳೆಯಗಾರ ಪದ್ದಜಗದೇವರಾಯನ ಕಾಲದಲ್ಲಿ ನಡೆಯಿತು. ಈ ಕಬ್ಬಾಳು ದುರ್ಗವು ಸಮುದ್ರ ಮಟ್ಟದಿಂದ 1069 ಮೀ ಎತ್ತರದಲ್ಲಿದ್ದು ಇದು ಶಂಖಾಕೃತಿಯನ್ನು ಹೊಂದಿದೆ. ಕಡಿದಾದ ಪಕ್ಕಗಳಿಂದ ಕೂಡಿದ ಈ ಬೆಟ್ಟದ ಮೇಲೆ ಕೋಟೆ ಇದೆ. ಒಂದು ಕಡೆಯಿಂದ ಮಾತ್ರ ಈ ಬೆಟ್ಟದ ಮೇಲೇರಿ ಹೋಗಲು ಸಾಧ್ಯ. ಅಲ್ಲೂ ಮೆಟ್ಟಿಲಿಗಳು ಬಲು ಕಡಿದು ಅವನ್ನು ಬಂಡೆಯಲ್ಲಿಯೇ ಕೊರೆಯಲಾಗಿದೆ. ಕೆಲವು ಕಡೆಗಳಲ್ಲಿ ಮೆಟ್ಟಿಲುಗಳು 6 ಅಂಗುಲ ಮಾತ್ರ ಇದ್ದು ಅವು ಬಹಳ ಕಿರಿಯದಾಗಿವೆ. ಆದ್ದರಿಂದ ಇದನ್ನು ಹತ್ತುವುದು ಬಲು ಕಷ್ಟ. ಸಾಕಷ್ಟು ಆಹಾರ ನೀರುಗಳನ್ನೊದಗಿಸಿಕೊಂಡು ಇಲ್ಲಿ ಉಳಿದರೆ ಶತ್ರುವಿನ ಆಕ್ರಮಣ ಭಯವಿಲ್ಲದೆ ಇರುವುದು ಇಲ್ಲಿ ಸಾಧ್ಯವಿತ್ತು.

ಚನ್ನಪಟ್ಟಣ ರಾಜಧಾನಿ ಕಬ್ಬಲು ದುರ್ಗಾಗೆ ಸ್ಥಳಾಂತರಗೊಂಡರು
ಅಲ್ಲದೇ ಪೆದ್ದ ಜಗದೇವರಾಯನು ರಾಜಧಾನಿಯನ್ನಾಗಿ ಆರಿಸಿಕೊಂಡ ಚನ್ನಪಟ್ಟಣ ಪ್ರದೇಶವು ಬಯಲು ಸೀಮೆ ಪ್ರದೇಶವಾದುದುರಿಂದ ತನ್ನ ಶತ್ರಗಳನ್ನು ಎದುರಿಸಲು ಅನುಕೂಲವಾಗುವಂತೆ ಚನ್ನಪಟ್ಟಣದ ಸೈನ್ಯದ ಶಿಬಿರವನ್ನು ಅಥವಾ ಠಾಣೆಯನ್ನು ಕಬ್ಬಾಳು ದುರ್ಗದ ಕೆಳಗಿನ ಬಯಲು ಪ್ರದೇಶದಲ್ಲಿ ಸ್ಥಾಪಿಸಿದನು. ಅಲ್ಲದೇ ಜಗದೇವರಾಯನು 15 ವರ್ಷಗಳ ತನ್ನ ಆಳ್ವಿಕೆಯ ಅವಧಿಯಲ್ಲಿ ಚನ್ನಪಟ್ಟಣ ರಾಜ್ಯಕ್ಕೆ ಒಂದು ರೂಪ ತಂದುಕೊಟ್ಟನು. ಇಲ್ಲಿ ಸೈನ್ಯದ ಶಿಬಿರವಿದ್ದಾಗ ಕಬ್ಬಾಳು ಗ್ರಾಮದಲ್ಲಿ ಒಂದು ದಿನ ಸಂತೆ ಕಟ್ಟಲು ಏರ್ಪಾಡು ಮಾಡಿದನು. ಕೆಲವೇ ವರ್ಷಗಳಲ್ಲಿ ಈ ಕಬ್ಬಾಳು ಗ್ರಾಮವು ವ್ಯಾಪಾರ ಸ್ಥಳವಾಗಿ ನಿತ್ಯವು ಸಂತೆ ನಡೆಯುತ್ತಿತೆಂದು ಅಲ್ಲಿನ ಜನ ಈಗಲೂ ಹೇಳುತ್ತಾರೆ. ಈ ಇಮ್ಮಡಿ ಜಗದೇವರಾಯ (ಆಳ್ವಿಕೆ 15 ವರ್ಷ) ಮುಮ್ಮುಡೀ ಜಗದೇವರಾಯ (7 ವರ್ಷ) ಮತ್ತು ಅಂಕುಶರಾಯ(16 ವರ್ಷ) ಆಳ್ವಿಕೆ ಮಾಡಿರುತ್ತಾರೆಂದು ತಿಳಿಸಲಾಗಿದೆ. ಆದರೆ ಕ್ರಿ.ಶ.1630 ರಲ್ಲಿ ಮೈಸೂರು ಚಾಮರಾಜ ಒಡೆಯರ್ ರವರು ಚನ್ನಪಟ್ಟಣವನ್ನು ವಶಪಡಿಸಿಕೊಂಡರು. ಇದರೊಂದಿಗೆ ಈ ರಾಜ್ಯದ ಇತರ ಭಾಗಗಳಾಗಿದ್ದ ಕಾನಕಾನಹಳ್ಳಿ, ಪಿರಿಯಾಪಟ್ಟಣ, ಮೈಸೂರು ರಾಜ್ಯದಲ್ಲಿ ಸೇರ್ಪಡೆಯಾಯಿತಲ್ಲದೆ ಚನ್ನಪಟ್ಟಣದ ಪಾಳೆಯಗಾರರ ಆಳ್ವಿಕೆಯೂ ಕೊನೆಗೊಂಡಿತ್ತು. ಹಾಗೂ ಚನ್ನಪಟ್ಟಣ ರಾಜ್ಯದ ಸೇನಾ ಶಿಬಿರವಾಗಿದ್ದ ಕಬ್ಬಾಳು ಸೇನಾ ನೆಲೆಯನ್ನು ಪೂರ್ಣ ನಾಶಪಡಿಸಿದ್ದರು. ಮುಂದೆ ಈ ಕೋಟೆಯು ಸೆರೆಯಾಳುಗಳನ್ನು ಇಡುವ ಒಂದು ಬಂಧಿಖಾನೆ ಕೋಟೆಯ ಪ್ರದೇಶವಾಯಿತು.

ಮೈಸೂರು ಸಂಸ್ಥಾನದ ದೊರೆಯಾದ ಒಂದನೆಯ ಕೃಷ್ಣರಾಜರಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅವರ ಅವಸಾನಕಾಲದಲ್ಲಿ ಅಂಕನಹಳ್ಳಿಯ ದೇವರಾಜನ ಪುತ್ರನಾದ ಚಾಮರಾಜನನ್ನು ದತ್ತು ಸ್ವೀಕರಿಸಲು ತನ್ನ ರಾಣಿ ದೇವರಾಜಮ್ಮನಿಗೆ ನಿರ್ದೇಶಿಸಿದ್ದರು. ದೇವರಾಜಮ್ಮನು ತನ್ನ ಪತಿಯ ಇಚ್ಛೆಯಂತೆ, ಆ ವೇಳೆಗೆ ಆಸ್ಥಾನದಲ್ಲಿ ಪ್ರಾಬಲ್ಯಕ್ಕೆ ಬಂದಿದ್ದ ಸರ್ವಾಧಿಕಾರಿ ನಂಜರಾಜಯ್ಯ, ದಳವಾಯಿ ದೇವರಾಜಯ್ಯ ಮತ್ತು ಕರಾಚೂರಿ ನಂಜರಾಜಯ್ಯ ಇವರನ್ನು ಬರಮಾಡಿಕೊಂಡು ಹಿಂದಿನ ರಾಜರ ಇಚ್ಛೆಯನ್ನು ವಿವರಿಸಿ ಅವರ ಪಟ್ಟಾಭಿಷೇಕವನ್ನು ಕ್ರಿ.ಶ 1732 ಮಾರ್ಚ್ 19 ರಂದು (ಶಾಲಿವಾಹನ ಶಕ 1655ನೇ ಪರೀಧಾವಿ ಸಂವತ್ಸರದ ಚೈತ್ರ ಶುದ್ದ ಪಂಚನಿಯಲ್ಲಿ) ನೆರವೇರಿಸಿದರು. ಆ ವೇಳೆಗೆ ಚಾಮರಾಜರಿಗೆ ಒಂದು ಮದುವೆಯಾಗಿದ್ದು ಇವರಿಗೆ 28 ವರ್ಷ ವಯಸ್ಸಾಗಿತ್ತು. ಪಟ್ಟಾಭಿಷೇಕವಾದ ಮೇಲೆ ಶಾಲಿವಾಹನ ಶಕ 1655ನೇ ಪರೀಭಾವಿ ಸಂವತ್ಸರದ ಚೈತ್ರ ಶುದ್ದ ಸಪ್ತಮಿಯಲ್ಲಿ ವಿವಾಹವಾದರು ಇಬ್ಬರು. (2) ಶೂಲಗಿರಿ ನಂಜರಾಜಯ್ಯನವರ ಕುಮಾರ್ತಿ ದೇವಾಜಮ್ಮಣ್ಣಿಯವರು (3) ಮೂಗೂರು ಮನೆತನದ ಆಳಗಂಜಿ ಬಾಳಯ್ಯನವರ ಕುಮಾರ್ತಿ ದೇವಜಮ್ಮಣ್ಣಿಯವರು.

ಚಾಮರಾಜ ಒಡೆಯರ್ ಅಧಿಕಾರ ವಹಿಸಿಕೊಂಡ ಅನಂತರ ಹಲವು ತಿಂಗಳ ಕಾಲ ದಳವಾಯಿಗಳ ಪ್ರಾಬಲ್ಯವನ್ನು ಸಹಿಸಿಕೊಂಡಿದ್ದರು. ಆ ವೇಳೆಗೆ ಆಡಳಿತವೆಲ್ಲವೂ ಕಳಲೆ ಕುಟುಂಬದವರಾದ ದೇವರಾಜಯ್ಯ ಮತ್ತು ಕರಾಚೂರಿ ನಂಜರಾಜಯ್ಯ ಸರ್ವಾಧಿಕಾರಿ ನಂಜರಾಜಯ್ಯ ಇವರ ಕರಗತವಾಗಿತ್ತು. ರಾಜ್ಯದ ಆಡಳಿತ ಮತ್ತು ಹಣಕಾಸಿನ ವ್ಯವಹಾರದ ಜೊತೆಗೆ ಅರಮನೆಯ ಆಡಳಿತ ಹಾಗೂ ರಾಜನಿಗೆ ಸೇರಿದ ಜಮೀನುಗಳ ಉತ್ಪತ್ತಿ ಮೊದಲಾದ ಎಲ್ಲಾ ವಿಷಯಗಳ ಮೇಲ್ವಿಚಾರಣೆಯನ್ನೂ ದಳವಾಯಿಗಳೇ ನಿರ್ವಹಿಸುತ್ತಿದ್ದರು.
ಸೈನ್ಯವು ರಾಜನ ವಿರುದ್ಧ ಬಂಡಾಯವಾಯಿತು
ಈ ಮೂವರೂ ಸೇರಿ ತಮ್ಮ ರಾಜನಿಗೆ ಸ್ವಾಮಿದ್ರೋಹವನ್ನು ಮಾಡಲು ಆಸಕ್ತರಾಗಿ ರಾಜ್ಯದಲ್ಲಿ ಹುಟ್ಟಿದ ದ್ರವ್ಯದಲ್ಲಿ ಗಡಿ ಒಂದಕ್ಕೆ ಪ್ರತಿವರ್ಷದಲ್ಲಿಯೂ ದಳವಾಯಿ ದೇವರಾಜಯ್ಯನಿಗೂ ಹಾಗೂ ಇವನ ತಮ್ಮನಿಗೂ 2000 ವರಹಗಳು, ಮತ್ತು ಸರ್ವಾಧಿಕಾರಿ ನಂಜರಾಜಯ್ಯನಿಗೆ 1000 ವರಹಗಳು ಈ ಮೇರೆಗೆ ಬರುವಂತೆ ಒಡಂಬಡಿಕೆಯನ್ನು ಮಾಡಿಕೊಂಡಿದಲ್ಲದೆ, ತಮ್ಮ ಕಡೆಯ ಆಪ್ತರಾದ ಊಳಿಗದವರು ಲಂಚವನ್ನು ತೆಗೆದುಕೊಂಡು ಇವರಿಗೆ ನೀಡಿದರೆ ಮುಂದೆ ಅವರು ಹೇಳಿದವರಿಗೆ ಅಧಿಕಾರವನ್ನು ನೀಡುತ್ತಿದ್ದರು. ಮತ್ತು ಗಡಿಗಳಲ್ಲಿ ತೋಟ ಗದ್ದೆ ಬೆದ್ದಲು ಮುಂತಾದ ಉತ್ತಮ ಭೂಮಿಯನ್ನು ತಮ್ಮದಾಗಿ ಮಾಡಿಕೊಂಡು ಅರಮನೆಗೆ ಸರಬರಾಜಾಗುತ್ತಿದ್ದ ದವಸ ಧಾನ್ಯಗಳಲ್ಲಿ ತಮ್ಮ ಭಾಗದ್ದೆಂದು ತರಿಸಿಕೊಳ್ಳುತ್ತಾ ನಂಬಿಕೆಯ ದ್ರೋಹವನ್ನು ಮಾಡುತ್ತಿದ್ದರು.

ಇದನ್ನು ಗಮನಿಸಿದ ಚಾಮರಾಜ ಒಡೆಯರ್, ದಳವಾಯಿಗಳ ಸರ್ವಾಧಿಕಾರವನ್ನು ಕೊನೆಗಾಣಿಸಿ ಈ ದುಃಸ್ಥಿತಿಯಿಂದ ಪಾರಾಗಲು ಕ್ರಿ.ಶ 1732ರ ಡಿಸೆಂಬರ್ ನಲ್ಲಿ ಒಂದು ಸ್ಪಷ್ಟವಾದ ನಿರ್ಧಾರವನ್ನು ತೆಗೆದುಕೊಂಡರು. ರಆಜನ ನಿರ್ಧಾರವನ್ನು ಸಂಚಿನಿಂದ ತಿಳಿದ ದಳವಾಯಿ ದೇವರಾಜಯ್ಯನು, ದೊರೆ ಚಾಮರಾಜ ಒಡೆಯರ್ ರವರ ಸಾಕುತಾಯಿಯಾದ ದೇವರಾಜಮ್ಮನವರಿಗೆದೂರು ಹೇಳುವುದರ ಮೂಲಕ ಅವರ ಮನಸ್ಸನ್ನು ಗೆದ್ದು ತನಗೆ ಇಚ್ಛೆ ಬಂದಂತೆ ಅಧಿಕಾರ ಚಲಾಯಿಸುವಂತೆ ಅವರಿಂದ ವಾಗ್ದಾನ ಪಡೆದು, ಈ ಸಂಗತಿಯನ್ನು ತಿಳಿದ ಚಾಮರಾಜ ಒಡೆಯರ್ ಕ್ರಿ.ಶ 1733 ರ ಜನವರಿಯಲ್ಲಿ ದೇವರಾಜನನ್ನು ಸರ್ವಾಧಿಕಾರಿ ನಂಜರಾಜಯ್ಯನನ್ನೂ ಅಧಿಕಾರದಿಂದ ಕಿತ್ತುಹಾಕಿ ತನ್ನ ಆಪ್ತರನ್ನು ಅವರ ಸ್ಥಾನದಲ್ಲಿ ನೇಮಿಸಿದರು.

ದಳವಾಯಿ ದೇವರಾಜಯ್ಯನು ಅನುಭವಿಸುತ್ತಿದ್ದ ಅಧಿಕಾರವನ್ನು ತೆಗೆದು ದೇವಯ್ಯನೆಂಬ ಬ್ರಾಹ್ಮಣನಿಗೆ ನೀಡಿ ಸರ್ವಾಧಿಕಾರಿ ನಂಜಯ್ಯನ ಬದಲಿಗೆ ವೀರಶೆಟ್ಟಿ ಎಂಬುವನನ್ನು ನೇಮಕ ಮಾಡಿ, ಗೋಪೀನಾಥಯ್ಯನಿಗೆ ಪ್ರಧಾನತನವನ್ನು ಕೊಟ್ಟು ಇವರುಗಳಿಗೆ ಉಡುಗೊರೆಯನ್ನು ನೀಡಿ, ಕಂಠೀರವಯ್ಯ, ಕಡೂರುಚಿಕ್ಕಯ್ಯ, ನಾರಾಯಣಪ್ಪ ಶಿವನಪ್ಪ ಎಂನ ಈ ನಾಲ್ವರನ್ನು ಮಂತ್ರಾಲೊಚನೆಗೆ ಇಟ್ಟುಕೊಂಡರು.

ಅನಂತರ ಚಾಮರಾಜ ಒಡೆಯರ್ ಸ್ವತಂತ್ರವಾಗಿ ಆಡಳಿತ ನಡೆಸಿದ ಸಮಕಾಲೀನ ಕೃತಿಯಾದ ಶೃಂಗಾರರಾಜ ತಿಲಕ, ಬಾಣ, ಮತ್ತು ಇತರ ಆಕರಗಳಿಂದ ತಿಳಿದುಬರುವಂತೆ ಚಾಮರಾಜ ಒಡೆಯರ್ ದಕ್ಷತೆಯಿಂದ ಆಡಳಿತದ ಪ್ರತಿ ಅಂಶವನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಿದ್ದರು. ತನ್ನ ಹಿಂದಿನ ಅರಸರಂತೆ ದೇವಾಲಯಗಳಿಗೂ ವಿದ್ವಾಂಸರಿಗೂ ದಾನ ಧರ್ಮಗಳನ್ನು ನೀಡಿದರು. ಶ್ರೀರಂಗಪಟ್ಟಣ ಶ್ರೀಮಂತ ವರ್ತಕರಿಂದ ಕೂಡಿ ವ್ಯಾಪಾರ ಧರ್ಮ ಮತ್ತು ವಿದ್ವತ್ತಿನ ಕೇಂದ್ರವಾಗಿತ್ತೆಂದು ತಿಳಿದು ಬರುತ್ತದೆ. ಚಾಂರಾಜ ಒಡೆಯರ್ ನೇಮಿಸಿಕೊಂಡ ಅಧಿಕಾರಿಗಳು ಸಮರ್ಪಕವಾಗಿ ಹಾಗೂ ಪರಿಶುದ್ದತೆಯಿಂದ ಕೆಲಸ ನಿರ್ವಹಿಸುತ್ತಿದ್ದರು.

ಆದರೆ ಚಾಮರಾಜ ಒಡೆಯರ್ ಬಹುಕಾಲ ರಾಜನಾಗಿ ಮುಂದುವರೆಯುವ ಅದೃಷ್ಟ ಪಡೆದಿರಲಿಲ್ಲ. ಪದಚ್ಯುತರಾದ ದಳವಾಯಿಗಳು ಚಾಮರಾಜ ಒಡೆಯರ್ ಅವರ ಆಡಳಿತವನ್ನು ಕೊನೆಗಾಣಿಸಲು ಸಮಯ ಕಾಯುತ್ತಿದ್ದರು. ಈ ಮಧ್ಯೆ ಚಾಮರಾಜ ಒಡೆಯರ್ ರವರು ಹಲವು ಆರ್ಥಿಕ ಸುಧಾರಣೆಗಳನ್ನು ಕೈಗೊಂಡರು. ಸಾಕು ತಾಯಿಯಾದ ದೇವರಾಜಮ್ಮ ಇತಿಮಿತಿಯಿಲ್ಲದೆ ದಾನ ಧರ್ಮ ಕಾರ್ಯಗಳನ್ನು ನೆರವೇರಿಸುತ್ತಿದ್ದು ಹೆಚ್ಚ ಸಂಖ್ಯೆಯಲ್ಲಿ ಸೇವಕರನ್ನು ನೇಮಿಸಿಕೊಂಡಿದ್ದರು. ಈ ಊಳಿಗದವರು ಮಾಡುತ್ತಿದ್ದ ದೇವತಾಕಾರ್ಯದ ಹೆಸರು ಹೇಳಿ ಅರಮನೆಯ ಉಗ್ರಾಣದಿಂದ ಹೆಚ್ಚಿನ ಅನೇಕ ಸಾಮಾನುಗಳನ್ನು ತರುತ್ತಿದ್ದರು. ಮುಂದೆ ಅರಮನೆಯಲ್ಲಿ ಹೆಚ್ಚಿನ ದೇವರ ಪೂಜೆ ಆ ದಿನ ಇಲ್ಲದಿದ್ದರೂ / ನಡೆಯದಿದ್ದರೂ ಸುಳ್ಳು ಲೆಕ್ಕಗಳನ್ನು ಬರೆಯಿಸಿ ಸಾಮಾನುಗಳನ್ನು ಪಡೆದು ತಮ್ಮ ಮನೆಗಳಿಗೆ ಸಾಗಿಸುತ್ತಿದ್ದರು. ಈ ವಿಷಯಗಳು ಸಹ ಚಾಮರಾಜ ಒಡೆಯರ ಗಮನಕ್ಕೆ ಬಂತು. ಈ ಬಗ್ಗೆ ಹೊಸ ನಿಯಮವನ್ನು ಜಾರಿಗೆ ತರಲು ಯೋಚಿಸತೊಡಗಿದರು. ಚಾಂರಾಜ ಒಡೆಯರ್ ರವರು ಮುಂದೆ ತರಲಿದ್ದ ಆರ್ಥಿಕ ಸುಧಾರಣೆಯಿಂದ ತಮಗೆ ತೊಂದರೆಯಾಗುವುದೆಂದು ಗ್ರಹಿಸಿದ ಹಲವರು ರಾಣಿಗೆ ಚಾಡಿಹೇಳತೊಡಗಿದರು.

ಈ ಸಮಯವನ್ನು ಕಾಯುತ್ತಿದ್ದ ಕಳಲೆ ಸಹೋದರರು ದಂಡಿನ ಮುಖ್ಯಸ್ಥನಾದ ಮದ್ದಗಿರಿ ಮಲ್ಲಯ್ಯನ ಬಳಿಯಲ್ಲಿದ್ದ ಹೈದರಾಲಿ ಎಂಬ ಜಮಾದಾರ ಮುಂತಾದವರನ್ನು ಕರೆಯಿಸಿ ಅವರಿಗೆ ಹಣ ನೀಡಿ ನೀವು ಅರಮನೆಯ ಸಂಬಳವನ್ನು ಪಡೆದ ನಂತರ ದೊರೆಯವರಲ್ಲಿ ಹೋಗಿ ತಾವು ಕೆಲಸಕ್ಕೆ ಬರುವುದಿಲ್ಲವೆಂದು ಹೇಳಿ ರಾಜನ ಮೇಲೆ ದಂಗೆ ಹೊಗತಕ್ಕದ್ದೆಂದು ತಿಳಿಸಿದರು. ಈ ಮಾತಿಗೆ ಒಪ್ಪಿದ ಸಐನ್ಯ ಸಿಬ್ಬಂದಿಯವರು ಸಂಬಳವನ್ನು ಪಡೆದು ತಾವು ಇನ್ನು ಮುಂದೆ ಕೆಲಸ ಮಾಡುವುದಿಲ್ಲವೆಂದು ತಿಳಿಸಿ 2000 ಕುದುರೆ ಯೋಧರು ಹಾಗೂ 6000 ಬಾರಿನವರು ಕೋಟೆಯ ಹೊರಪ್ರದೇಶದಲ್ಲಿ ನಿಂತರು.

ವಿಶೇಷ ಹಣದ ಆಸೆಯನ್ನು ತೋರಿಸಿ ಸೈನ್ಯದಲ್ಲಿ ಒಡಕು ಉಂಟು ಮಾಡಿ ರಾಜರ ಮೇಲೆ ಸೈನ್ಯವು ತಿರುಗಿ ಬೀಳುವಂತೆ ಮಾಡಿ, ನಂತರ ತಾವೇ ಅದರ ಮುಖಂಡವನ್ನು ವಹಿಸಿ, ರಾತ್ರಿಯ ವೇಳೆಯಲ್ಲಿ ದಂಗೆ ನಡೆಸಿದರು ಕುಹುಕವನ್ನರಿಯದ ಚಾಮರಾಜ ಒಡೆಯರ್ ದಳವಾಯಿ ದೇವರಾಜಯ್ಯನೊಡನೆ ಸೌಹಾರ್ದ ಒಪ್ಪಂದಕ್ಕೆ ಮುಂದಾಗಬೇಕಾಯಿತು. ಆದರೆ ಸಮಯ ಸಾಧಕನಾದ ದಳವಾಯಿ ಅರಮನೆಯ ಬಾಗಿಲನ್ನು ಒಡೆಸಿ ಚಾಮರಾಜರ ರಾಜತ್ವ ಚಿಹ್ನೆಗಳನ್ನು ಕಸಿದುಕೊಂಡು ಸಿಂಹಾಶನದ ಮೇಲಿಟ್ಟು ಅವರನ್ನು ಕ್ರಿ.ಶ.1734 ಜೂನ್ 10 ರಂದು ಅಧಿಕಾರಚ್ಯುತರನ್ನಾಗಿ ಮಾಡಿದ. ಅವನ ಅಧಿಕಾರಿಗಳನ್ನೆಲ್ಲ ಸೆರೆಮನೆಗೆ ಕಳುಹಿಸಲಾಯಿತು.

j
ಅನಂತರ ಮೊದಲು ಚಾಮರಾಜ ಒಡೆಯರ್ ಅವರನ್ನೂ ಹಾಗೂ ಅವರ ಮೂವರು ಪತ್ನಿಯರನ್ನೂ ಶ್ರೀರಂಗಪಟ್ಟಣದಲ್ಲಿಯೇ ಬೇರೆಯ ಸ್ಥಳಗಳಲ್ಲಿ ಗೃಹಬಂಧನದಲ್ಲಿ ಇಡಲಾಯಿತು. ಕೆಲವು ದಇನಗಳ ನಂತರ ಚಾಂರಾಜ ಒಡೆಯರ್ ಅವರನ್ನೂ ಹಾಗೂ ಅವರ ಮೂವರು ಪತ್ನಿಯರ ಸಂಏತರಾಗಿ ಗುಪ್ತವಾಗಿ ಕಬ್ಬಾಳು ದುರ್ಗಕ್ಕೆ ವರ್ಗಾಯಿಸಲಾಯಿತು. ಶ್ರೀರಂಗಪಟ್ಟಣದ ಜನತೆಗೆ ಚಾಂರಾಜ ಒಡೆಯರ್ ಹಾಗೂ ಅವರ ಮೂವರು ಪತ್ನಿಯರ ವಿಷಯ ರಾಜಕ್ರಾಂತಿಯ ನಂತರ ಏನಾಯಿತೆಂಬುದು ಯಾರಿಗೂ ಗೊತ್ತಾಗಲಿಲ್ಲ. ಕಬ್ಬಾಳು ಗ್ರಾಮದವರಿಗೂ ಸಹ ಅವರುಗಳು ದುರ್ಗದ ಮೇಲಿರುವುದು ಗೊತ್ತಿರಲಿಲ್ಲ.
ಕಬ್ಬಲು ದುರ್ಗಾ ಏಳು ಹಂತದ ಕೋಟೆಯನ್ನು ಹೊಂದಿದ್ದರು
ಕಬ್ಬಾಳು ದುರ್ಗವು ಏಳು ಸುತ್ತಿನ ಕೋಟೆ ಇದೆ ಎದುರಿನಲ್ಲಿ ಒಂದು ದೀಪದ ಕಂಬವಿದೆ. ಈ ಕೋಟೇಶ್ವರ ದೇವಾಲಯಕ್ಕೆ ಭೂಮಿಯನ್ನು ದಾನ ಮಾಡಿದ ಶಾಸನವು ಕ್ರಿ.ಶ. 1250 ಕನಕಪುರ ಶಾಸನ ಸಂಖ್ಯೆ 66 (ತಮಿಳು ಶಾಸನ) ರಲ್ಲಿ ದಾಖಲಾಗಿದೆ. ಆದ್ದರಿಂದ ಈ ಕೋಟೆಯು ಹೊಯ್ಸಳರ ಕಾಲದಲ್ಲಿಯೇ ಅಥವಾ ಅದಕ್ಕಿಂತ ಹಿಂದೆಯೇ ನಿರ್ಮಾಣವಾಗಿರಬೇಕೆಂದು ಖಚಿತವಾಗಿ ಹೇಳಬಹುದು. ಎರಡನೆಯ ಕೋಟೆಯನ್ನು ದಾಟಿದ ನಂತರ ಮೂರನೆಯ ಕೋಟೆಯ ಬಳಿ ಒಂದು ನೀರಿನ ದೊಣೆ ಇಲ್ಲಿ ಒಂದು ಗವಿಯೇ ಗುಡಿಯಾಗಿರುವ ಒಂದು ದೇವಾಲಯವಿದೆ. ಈ ಆವರಣದಲ್ಲಿ ಎರಡು ದೊಣೆಗಳಿವೆ ಈ ಗವಿ ದೇವಸ್ಥಾನದಲ್ಲಿ ಚಿಕ್ಕ ಶ್ರೀನಿವಾಸಮೂರ್ತಿ ದೇವರಿದೆ. ಇದನ್ನೇ ಶ್ರೀ ರಂಗನಾಥ ಎಂದು ಕೆಲವರು ಹೇಳುತ್ತಾರೆ. ಮೂರನೆಯ ಕೋಟೆಯಿಂದಲೇ ಸುಮಾರು 200 ಮೆಟ್ಟಿಲುಗಳನ್ನು ಕ್ಲಲಿನಲ್ಲಿ ಕೆತ್ತಿರುತ್ತಾರೆ. ಇವು ಬಹಳ ಕಡಿದಾಗಿದೆ. ನಾಲ್ಕನೆಯ ಕೋಟೆಯ ದಿಡ್ಡಿಬಾಗಿಲ ಬಳಿ ಬಂದು ನೀರಿನ ದೊಣೆ, ನಂತರ ಇಳಿಜಾರು ಬಂಡೆಯ ಹಾದಿ, ಇದಕ್ಕೆ ಮೆಟ್ಟಲುಗಳಿಲ್ಲ ಇಲ್ಲಿ ಬೆಟ್ಟವನ್ನು ಎಚ್ಚರಿಕೆಯಿಂದ ಹತ್ತಬೇಕಾಗುವುದು, ನಂತರ ಐದನೆಯ ಕೋಟೆ, ಮುಂದೆ ಸಉಮಾರು 40 ತೊಟ್ಟಿಲುಗಳಂತಹ ಮೆಟಲುಗಳಿವೆ, ನಂತರ ಆರನೆಯ ಕೋಟೆ ಸುಮಾರು ಉದ್ದ 60 ಅಡಿಗಳ ಹಾಗೂ 50 ಅಡಿಗಳ ಪ್ರದೇಶದಲ್ಲಿ ನಿರ್ಮಿಸಿರುವ ಧಾನ್ಯಗಳ ಕಣಜ, ಅದರ ಪಕ್ಕದಲ್ಲಿಯೇ ತುಪ್ಪ ಮತ್ತು ಎಣ್ಣೆ ಕಣಜಗಳು ಹತ್ತಿರದಲ್ಲಿಯೇ ನೀರಿನ ದೊಣೆ. ಪಶ್ಚಿಮದಲ್ಲಿ ಸುಮಾರು 600 ಅಡಿಗಳ ಒಂದು ಪ್ರಪಾತ ಕಣೀವೆ, ಅದರ ಬಳಿ ಒಂದು ಏತ, ಇದು ಅಲ್ಲಿ ಮೃತರಾದವರ ಶವಗಳನ್ನು ಪ್ರಪಾತಕ್ಕೆ ಬೀಳಿಸುವ ಒಂದು ಸಲಕರಣೆ. ಎಡಕ್ಕೆ ದೇವಸ್ಥಾನಕ್ಕೆ ಹೋಗುವ ದಾರಿ, ಮದ್ದಿನ ಮನೆ ಹಾಗೂ ಕಾವಲುಗಾರರ ಮನೆಗಳು ಇವೆ. ನಂತರ ಏಳನೆಯ ಕೋಡೆಯು ಸುಮಾರು 600 ಅಡಿ ಉದ್ದ ಹಾಗೂ 300 ಅಡಿ ಅಗಲವಿರಿವ ಒಂದು ಕಲ್ಲು ಮಣ್ಣಿನ ಕೋಟೆಯಾಗಿದೆ. ಈ ಕೋಡೆಯಲ್ಲಿ ಒಂದು ಅರಮನೆ(ಈಗ ಅದರ ಭಗ್ನಾವಶೇಷವನ್ನು ಕಾಣಬಹುದಾಗಿದೆ).

ಎರಡು ಮರದ ವಿಗ್ರಹಗಳು
ಬೆಟ್ಟದ ತುದಿಯಲ್ಲಿ ಭೀಮೇಶ್ವರದೇವರ ಒಂದು ಗುಡಿ ಇದೆ. ಅದರಲ್ಲಿ (ಈಗ ಭಿನ್ನವಾದ) ಶಿವಲಿಂಗವಿದೆ, ಹಾಗೆಯೇ ಎರಡು (ಈಗ ಭಗ್ನ) ಗಣಪತಿಯ ವಿಗ್ರಹಗಳು ಇವೆ. ಈ ಭೀಮೇಶ್ರ ಒಂದು ಗರ್ಭಗೃಹ ಮತ್ತು ಒಂದು ನವರಂಗ ವಿಭಾಗಗಳು ಇರುತ್ತದೆ. ಈ ದೇವಸ್ಥಾನಕ್ಕೆ ಪಶ್ಚಿಮ ಮುಖವಾಗಿರುವ ದ್ವಾರವಿದೆ. ಗುಡಿಯ ಎದುರು ಒಂದು ದೀಪದ ಕಂಬ ಗುಡಿಯ ಈಶಾನ್ಯ ದಿಕ್ಕಿಗೆ ಸ್ವಲ್ಪದೂರದಲ್ಲಿರಿವ ಒಂದು ನೀರಿನ ದೊಣೆ. ಅವರ ಪೂರ್ವಕ್ಕೆ ದೊಡ್ಡದಾದ ಒಂದು ಕಲ್ಲಿನ ಕೊಳ ಇದು ವೃತ್ತಾಕಾರವಾಗಿದ್ದು ಇದರ ವ್ಯಾಸ ಸುಮಾರು 100 ಅಡಿಗಳು.

ಚಾಮರಾಜ ಒಡೆಯರ್ ಮತ್ತು ಅವರ ಪತ್ನಿಯರು ಕಬ್ಬಾಳು ದುರ್ಗದಲ್ಲಿ ಬಹಳ ದಿನವಿದ್ದರೆ ತಮಗೆ ತೊಂದರೆಯಾಗಬಹುದೆಂದು ಭಾವಿಸಿ ಕಬ್ಬಾಳು ಬೆಟ್ಟದ ತುದಿಯಲ್ಲಿ ಇರುವ ಭೀಮೇಶ್ವರ ದೇವರ ದೇವಸ್ಥಾನದ ಬಳಿ ಇದ್ದ ನೀರಿನ ಹೊಂಡಕ್ಕೆ ಸಣ್ಣ ಪ್ರಮಾಣದಲ್ಲಿ ವಿಷವನ್ನು ಸೇರಿಸಿದ್ದರು. ಈ ಹಿಂದೆ ಶ್ರೀರಂಗಪಟ್ಟಣದಲ್ಲಿ ಅವರುಗಳನ್ನು ಗೃಹಬಂಧನಕ್ಕೆ ದಳವಾಯಿ ದೇವರಾಜನು ಕಳುಹಿಸುವ ವೇಳೆಯಲ್ಲಿ ಚಾಂರಾಜರೂ ಹಾಘೂ ಅವರ ಮೂವರು ರಾಣಿಯರು ತಮ್ಮ ಜೊತೆಯಲ್ಲಿ ತಮ್ಮ ಮನೆತನದ ಅಧಿದೇವತೆಯಾಗಿದ್ದ ಮೈಸೂರು ಚಾಮುಂಡೇಶ್ವರಿ ಅಮ್ಮನವರ ಮತ್ತೊಂದು ರೂಪವಾದ ಕಾಳಿಖಾದೇವಿಯ ಮರದ ಎರಡು ವಿಗ್ರಹವನ್ನು, ತಮ್ಮ ಜೊತೆ ಇಟ್ಟುಕೊಂಡಿದ್ದರು, ಮತ್ತೆ ಅವರುಗಳನ್ನು ಶ್ರೀರಂಗಪಟ್ಟಣದಿಂದ ಸ್ಥಳಪಲ್ಲಟ ಮಾಡಿ ಗುಪ್ತವಾಗಿ ಕಬ್ಬಾಳು ದುರ್ಗಕ್ಕೆ ಕರೆದುಕೊಂಡು ಬಂದಾಗ ಸಹ ಅವರುಗಳು ತಮ್ಮ ನಂಬಿಕೆಯ ದೇವತೆಯಾದ ಕಾಳಿಕಾದೇವತೆಯ ವಿಗ್ರಹಗಳನ್ನೂ ಮರೆಯದೆ ತೆಗೆದುಕೊಂಡು ಬಂದಿದ್ದರು. ಆಗ ಈ ಎರಡು ಮರದ ವಿಗ್ರಹಗಳನ್ನು ತರಲು ಯಾರೂ ಅಡ್ಡಿಪಡಿಸಿರಲಿಲ್ಲ ನಂತರ ಈ ವಿಗ್ರಹಗಳನ್ನು ಬೆಟ್ಟದ ಮೇಲಿನ ಕಬ್ಬಾಳು ದುರ್ಗದ ಅರಮನೆಯ ಎರಡು ಸ್ಥಳಗಳಲ್ಲಿ ಇಟ್ಟು ದಿನವೂ ಚಾಮರಾಜ ಒಡೆಯರ ಎರಡನೆಯ ಹಾಗೂ ಮೂರನೆಯ ರಾಣಿಯರು ಪೂಜೆ ಮಾಡಿತ್ತಿದ್ದರು. ಇದರಿಂದ ಅವರಿಗೆ ಒಂದು ರೀತಿಯ ನೆಮ್ಮದಿ ದೊರೆಯುತ್ತಿತ್ತು.

ಕಬ್ಬಾಳಮ್ಮನ ದೇವಸ್ಥಾನಕ್ಕೆ ಉತ್ತರದಲ್ಲಿರುವ ಕ್ರಿ.ಶ 1429 ರ ಕನಕಪುರ 65ರ ಒಂದು ಶಾಸನದಲ್ಲಿ ಕಾಳಿಕಾದೇವಿಯ ಉಲ್ಲೇಖವಾಗಿರುವುದರಿಂದ ಮುಂದೆ ಈ ಕಾಳಿಕಾದೇವಿಯನ್ನೇ ಕಬ್ಬಾಳಮ್ಮು ಎಂದು ಕರೆಯತೊಡಗಿರುತ್ತಾರೆ. ಇದು ಕೆಲವರ ಅಭಿಪ್ರಾಯವಾಗಿದೆ. ಈ ಕಬ್ಬಾಳಮ್ಮನ ವಿಗ್ರಹವು ಕ್ರಿ.ಶ 1429 ಕ್ಕಿಂತ ಹಿಂದೆಯೇ ಈ ಕಬ್ಬಾಳು ಗ್ರಾಮದಲ್ಲಿ ಇದ್ದ ಬಗ್ಗೆ ದಾಖಲೆ ಸಿಕ್ಕಿರುವುದಾಗಿ ಹೇಳುತ್ತಾರೆ. ಈ ಕಬ್ಬಾಳು ಗ್ರಾಮದಲ್ಲಿ ಈಗಲೂ ಕಾಳೀಕಾದೇವಿಯ ಹಾಸುಕಲ್ಲಿನ ವಿಗ್ರಹವು ಇರುವುದು ನಿಜ ಸಂಗತಿಯಾಗಿದೆ. ಆದರೆ ಅದು ಭಿನ್ನವಾಗಿ ಕಬ್ಬಾಳು ದುರ್ಗದ ಮೇಲಿನ ವೃತ್ತ ಸರೋವರದ ಆಗ್ನೇಯ ಮೂಲೆಯಲ್ಲಿ ಬಿದ್ದಿದೆ.

ಶ್ರೀ ರಂಗಪಟ್ಟಣದಿಂದ ತಂದ ಎರಡು ಕಾಳಿಕಾದೇವಿಯರ ಮರದ ಮೂರ್ತಿಗಳಲ್ಲಿ ಎರಡನೆಯ ರಾಣಿಯು ಪೂಜೆಮಾಡುತ್ತಿದ್ದ ವಿಗ್ರಹವು ಮೈಸೂರು ಅರಸರು ಹದಿನಾಡಿನಿಂದ ಮೈಸೂರು ಪ್ರದೇಶವನ್ನು ಗೆದ್ದು, ನಂತರ ಮೈಸೂರು ಅರಮನೆಗೆ ಬಂದ ವೇಳೆಯಲ್ಲಿ ಬಂದ ವಿಗ್ರಹವಾಗಿತ್ತು ಇದು ಅರಮನೆಗೆ ಬಂದ ನಂತರ ಅವರ ಅಭಿವೃದ್ದಿಯಲ್ಲಿ ಯಶಸ್ಸನ್ನು ಗಳಿಸಿದ್ದರು. ಈ ವಿಗ್ರಹವನ್ನು ಸಕಲ ಶಾಸ್ತ್ರ ಪುರಾಣ ವಿಧೀ ವಿಧಾನಗಳಿಂದ ಹಿರಿಯ ಋಷಿಮುನಿಗಳು ಪೂಜೆ ಮಾಡಿ ಆರಾಧಿಸಿದ ವಿಗ್ರಹವಾಗಿತ್ತು ಎಂದು ಕೆಲವರು ಹೇಳುತ್ತಾರೆ. ಆದ್ದರಿಂದ ಈ ಕಾಳಿಕಾದೇವರ ವಿಗ್ರಹವು ಅಪೂರ್ವವಾದ ಶಕ್ತಿ ಸಾಮಥ್ರ್ಯವನ್ನು ಹೊಂದಿತ್ತು. ಈ ಚಾಮುಂಡೇಶ್ವರಿ ದೇವರ ಮತ್ತೊಂದು ಸ್ವರೂಪವಾದ ಕಾಳಿಕಾದೇವಿಯ ವಿಗ್ರಹವನ್ನು ಚಾಮರಾಜ ಒಡೆಯರ್ ಅವರ ಎರಡನೆಯ ಪತ್ನಿಯಾದ ಶೂಲಗಿರಿ ನಂಜರಾಜನ ಕುಮಾರ್ತಿಯಾದ ದೇವಾಜಮ್ಮಣ್ಣಿಯವರು ಶ್ರೀರಂಗಪಟ್ಟಣದ ಅರಮನೆಯಲ್ಲಿ ಪೂಜಿಸುತ್ತಿದ್ದರು. ಆಗ ಚಾಮರಾಜ ಒಡೆಯರ್ ರವರ ಮೂರನೆಯ ಪತ್ನಿಯಾದ ಮೂಗೂರು ಆಳಗಂಜಿ ಬಾಳಯ್ಯನವರ ಕುಮಾರ್ತಿ ದೇವಾಜಮ್ಮಣ್ಣಿಯವರೂ ತಮಗೂ ಈ ವಿಗ್ರಹವನ್ನು ಪೂಜಿಸಲು ಅವಕಾಶ ನೀಡಬೇಕೆಂದು ಚಾಮರಾಜ ಒಡೆಯರ್ ಅವರಿಗೆ ಪ್ರಾರ್ಥನೆ ಮಾಡಿತ್ತಿದ್ದರು. ಆದರೆ ಅದಕ್ಕೆ ಎರಡನೆಯ ರಾಣಿಯವರು ಅವಕಾಶ ನೀಡಿರಲಿಲ್ಲ. ಈ ವಿವಾದವನ್ನು ಗಮನಿಸಿದ ಚಾಮರಾಜ ಒಡೆಯರ್ ರವರು ಇಂತಹುದೇ ದೇವಿಯ ಮತ್ತೊಂದು ವಿಗ್ರಹವನ್ನು ತಮ್ಮ ಶಿಲ್ಪಿಗಳಲ್ಲಿ ಮಾಡಿಸಿ ಅದನ್ನು ಮೂರನೆಯ ರಾಣಿಗೆ ಕೊಟ್ಟಿದ್ದರು.


ಕಬ್ಬಾಳು ದುರ್ಗದಲ್ಲಿ ರಾಜ ರಾಣಿಯರ ದಿನಚರಿ

1ರಾಜ ಚಾಮರಾಜ ಮತ್ತು ಅವನ ಪತ್ನಿಯರು
ಚಾಮರಾಜ ಒಡೆಯರ್ ಮತ್ತು ಅವರ ಪತ್ನಿಯರು ಕಬ್ಬಾಳು ದುರ್ಗದಲ್ಲಿ ಬಂದಿಯಾಗಿ ವಾಸಿಸುತ್ತಿದ್ದ ವೇಳೆಯಲ್ಲಿ ಅಲ್ಲಿಯ ಕಾವಲು ಕಾರ್ಯದ (ತಂತ್ರದ) ಬಗ್ಗೆ ಕೆಲವು ವಿಷಯಗಳನ್ನು ತಮ್ಮ ಮುಂದೆ ಇಡುವುದು ಅವಶ್ಯವೆಂದು ಕಂಡುಬರುತ್ತದೆ.

ಕಬ್ಬಾಳು ಕೋಟೆಯಲ್ಲಿ ಆಗ ಬೆಟ್ಟದ ತುದಿಯಲ್ಲಿ ಕೆಲವು ನಗಾರಿಗಳು ಕೊಂಬು ಕಹಳೆ ಮುಂತಾದವುಗಳು ಇದ್ದವು ಅಲ್ಲಿಯ ಕಾವಲುಗಾರರು ಸೂರ್ಯ ಹುಟ್ಟಿದ ಸಮಯಕ್ಕೆ ಸರಿಯಾಗಿ ಅಲ್ಲಿಯ ರೌದ್ರ ನಗಾರಿಯನ್ನು ಭಾರಿಸುತ್ತಿದ್ದರು. ಅದೇ ರೀತಿ ಸಂಜೆ ಸಹ ಸೂರ್ಯನು ಮುಳುಗಿದ ವೇಳೆಗೆ ಸರಿಯಾಗಿ ಅದೇ ನಗಾರಿಯನ್ನು ಭಾರಿಸುತ್ತಿದ್ದರು ಅಲ್ಲದೇ ದುರ್ಗದ ತುದಿಯಲ್ಲಿರುವ ಭೀಮೇಶ್ವರ ಗುಡಿಯ ಮುಂದಿರುವ ದೀಪದ ಕಂಬದ ಸೂರ್ಯನ ನೆರಳಿನಿಂದ ಗಂಟೆಯ ಪ್ರಹಾರಗಳನ್ನು ಗುರ್ತಿಸಿ ನಂತರ ರೌದ್ರ ನಗರಿಯನ್ನು ಭಾರಿಸುತ್ತಿದ್ದರು. ಅಲ್ಲದೇ ಈ ಬೆಟ್ಟದಿಂದ ಸುತ್ತಲೂ ನೋಡುತ್ತಿದ್ದ ಕಾವಲುಗಾರರು, ಶತ್ರುಗಳ ದಂಡುದಾಳಿಗಳ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿ ಸಂದೇಶವನ್ನು ತಮ್ಮ ಕೊಂಬು ಕಹಳೆಗಳ ಮುಖಾಂತರ ಎಲ್ಲಿಗೆ ತಲುಪಿಸಬೇಕೊ ಅಲ್ಲಿಗೆ ಮುಟ್ಟಿಸುತ್ತಿದ್ದರು ಅಲ್ಲದೆ ಪ್ರತಿದಿನ ಸಂಜೆ ಎಲ್ಲವೂ ಶಾಂತವಾಗಿ ಇರುತ್ತದೆ ಎಂಬ ಬಗ್ಗೆ ಒಂದು ಬೆಂಕಿಯ ಜ್ವಾಲೆಯನ್ನು ಸಹ ನಿಗದಿತ ಸ್ಥಳದಲ್ಲಿ ಹತ್ತಿಸಿ ಸೂಚನೆಗಳನ್ನು ನೀಡುತ್ತಿದ್ದರು.

ಚಾಮರಾಜ ಒಡೆಯರ್ ಮತ್ತು ಅವರ ಪತ್ನಿಯರ ದಿನಚರಿಯ ಕಬ್ಬಾಳು ದುರ್ಗದಲ್ಲಿ ಬೆಳಗ್ಗೆ ಸೂರ್ಯ ಹುಟ್ಟಿದ ನಂತರ ರೌದ್ರ ನಗಾರಿಯ ಶಬ್ದದ ಕೆಲವು ಕೊತ್ತಿನ ನಂತರ ಬೆಳಗಿನ ಪಹರೆಯದಾರರು ಬರುತ್ತಿದ್ದರು. ನಂತರ ಅವರಗಳ ಸಮ್ಮುಖದಲ್ಲಿ ಏಳನೆಯ ಕೋಟೆಯ ಬಾಗಿಲನ್ನು ಕಾವಲುಗಾರರು ತೆಗೆಯುತ್ತಿದ್ದರು. ಹೊಸದಾಗಿ ಬಂದ ಪಹರೆಯವರಿಗೆ ಚಾಮರಾಜ ಒಡೆಯರ್ ಮತ್ತು ಅವರ ಪತ್ನಿಯರು ಅರಮನೆಯ ಹೊರಬಂದು ಅರಮನೆಯ ಜಗಲಿಯ ಮೇಲೆ ನಿಂತು ಅವರ ಹಾಜರಾತಿಯನ್ನು ನೀಡಬೇಕಾಗಿತ್ತು ನಂತರ ಮತ್ತೆ ಏಳನೆಯ ಕೋಟೆಯ ಬಾಗಿಲನ್ನು ಮುಚ್ಚುತ್ತಿದ್ದರು. ರಾತ್ರಿಯ ಕಾವಲುಗಾರರು ದುರ್ಗದ ಮೊದಲನೆಯ ಕೋಟೆಯ ಬಾಗಿಲನ್ನು ದಾಟಿದ ನಂತರ ಮತ್ತೆ ಎಲ್ಲಾ ಕೋಟೆಗಳ ಬಾಗಿಲು ಹಾಕಲಾಗಿದೆ. ಎಂದು ಸೂಚನೆಗಳು ಬಂದ ನಂತರವೇ ಮತ್ತೆ ಏಳನೆಯ ಕೋಟೆ ಬಾಗಿಲನ್ನು ತೆಗೆದು ಚಾಮರಾಜ ಒಡೆಯರ್ ಮತ್ತು ಅವರ ಪತ್ನಿಯರ ಆರನೆಯ ಮತ್ತು ಏಳನೆಯ ಕೋಟೆಯ ಕೆಲವು ಸ್ಥಳದಲ್ಲಿ ಮಾತ್ರ ಓಡಾಡಲು ಅವಕಾಶ ನೀಡುತ್ತಿದ್ದರು ಮತ್ತೆ ಸೂರ್ಯನು ನೆತ್ತಿಯ ಮೇಲೆ ಬರುವುದಕ್ಕಿಂತ ಮುಂಚೆ ತಮ್ಮ ಏಳನೆಯ ಕೋಟೆಯ ಒಳಗೆ ಸೇರಬೇಕಾಗಿತ್ತು ಮತ್ತೆ ಸಂಜೆ ಸ್ವಲ್ಪ ಹೊತ್ತು ಮಾತ್ರ ಏಳನೆಯ ಕೋಡೆ ಬಾಗಿಲು ತೆಗೆಯುತ್ತಿತ್ತು. ಅವರು ದೇವಸ್ಥಾನಕ್ಕೆ ಹೋಗಿ ಮತ್ತೆ ಸೂರ್ಯ ಮುಳುಗುವುದಕ್ಕಿಂತ ಮುಂಚೆ ಹೊಸ ಕಾವಲುಗಾರರು ಇವರ ಹಾಜರಿಯನ್ನು ಮಡೆಯುವ ಮೊದಲು ಏಳನೆಯ ಕೋಟೆಯ ಅರಮನೆಯಲ್ಲಿ ಇರಬೇಕಾಗಿತ್ತು.

2ಕಿಂಗ್ಸ್ ಚಿತಾಭಸ್ಮ
ಚಾಮರಾಜ ಒಡೆಯರ್ ಮತ್ತು ಅವರ ಪತ್ನಿಯರು ಬೆಳಗ್ಗೆ ಏಳನೆಯ ಕೋಟೆಯಿಂದ ಹೊರಗೆ ಹೋಗಲು ಅವಕಾಶ ನಈಡಿದ ಮೊದಲು ಚಾಮರಾಜ ಒಡೆಯರ್ ದೊಡ್ಡ ಕೊಳದಲ್ಲಿ ಸ್ನಾನ ಮಾಡಿ ಬೆಟ್ಟದ ಮೇಲಿರುವ ಶಿವದೇವಾಲಯಕ್ಕೆ ಹೋಗಿ ಅಲ್ಲಿ ಪೂಜೆಗೆ ಕುಳಿತುಕೊಳ್ಳುತ್ತಿದ್ದರು. ಆ ವೇಳೆಯಲ್ಲಿ ಕಾವಲುಗಾರರು ತಂದು ಕೊಟ್ಟ ನೀರಿನಿಂದ ರಾಣಿಯರು ಅರಮನೆಯಲ್ಲಿ ಸ್ನಾನ ಮಾಡಿ ತಮ್ಮ ಆರಾಧ್ಯ ದೇವತೆ ಕಾಳಿಕಾದೇವಿಗೆ ನಮಸ್ಕರಿಸುತ್ತಿದ್ದರು. ಇಲ್ಲಿ ಚಾಮರಾಜನ ಎರಡನೆಯ ಹಾಗೂ ಮೂರನೆಯ ರಾಣಿಯರು ತಾವು ತಂದ ಮರದ ಕಾಳಿಕಾದೇವಿಯ ವಿಗ್ರಹಗಳನ್ನು ಪೂಜೆ ಮಾಡಿದರೆ ಮೊದಲ ರಾಣಿಯು ಕೊಳದ ದಂಡೆಯ ಮೇಲೆದ್ದ ಹಾಸುಕಲ್ಲಿನ ಕಾಳಿಕಾದೇವಿಗೆ ಪೂಜೆ ಸಲ್ಲಿಸುತ್ತಿದ್ದರು ಅನಂತರ ಮೇಲಿನ ಶಿವ ದೇವಾಲಯಕ್ಕೆ ಹೋಗುತ್ತಿದ್ದರು ಅಲ್ಲಿ ಮಂಗಳಾರತಿಯಾದ ಮೇಲೆ ಮತ್ತೆ ಅರಮನೆಗೆ ಬಂದು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ಕಾವಲುಗಾರರು ತಂದು ಕೊಟ್ಟ ಆಹಾರವನ್ನು ತಿಂದು ಮತ್ತೆ ಧ್ಯಾನಕ್ಕೆ ಹೋಗುತ್ತಿದ್ದರು. ಸಂಜೆ ಮತ್ತೆ ಕೋಟೆಯ ಬಾಗಿಲು ತೆರೆದ ನಂತರ ಶಿವ ದೇವಾಲಯಕ್ಕೆ ಹೋಗಿ ದೀಪ ಹಚ್ಚಿ ಸ್ವಲ್ಪ ಹೊತ್ತು ಕುಳಿತ್ತಿದ್ದು ಮತ್ತೆ ಅರಮನೆಗೆ ಬಂದರೆ ಆ ದಿನದ ಕೆಲಸ ಕಾರ್ಯಗಳು ಮುಗಿದಂತೆ ಆಗುತ್ತಿತ್ತು ಕೆಲವು ಕಾಲದ ನಂತರ (ಬಹುಶಃ ಹೊಂಡದ ನೀರನ್ನು ಸೇವಿಸಿದ್ದರ ಫಲವಾಗಿ ಅಂದರೆ ಸೆರೆಯಾದ ಸ್ವಲ್ಪ ಕಾಲದಲ್ಲಿಯೇ) ಅನಾರೋಗ್ಯಕ್ಕೆ ತುತ್ತಾಗಿ ಮರಣಹೊಂದಿದರು.

3ಕಬ್ಬಲು ಗ್ರಾಮಗಳು
ಮಿಕ್ಕ ಕೈದಿಗಳ ಮೃತ ದೇಹವನ್ನು ಕಬ್ಬಾಳು ದುರ್ಗದ ಆರನೆಯ ಕೋಟೆಯ ಕಣಜದ ಪಶ್ಚಿಮಕ್ಕೆ ಸ್ವಲ್ಪ ದೂರದಲ್ಲಿರುವ ಸುಮಾರು 700 ಅಡಿ ಬೆಟ್ಟದ ಪ್ರಪಾತಕ್ಕೆ ಒಂದು ಏತದ ಮೂಲಕ ಹೆಣವನ್ನು ಬಿಸಾಡುವ ಕ್ರಮ ಇದ್ದಂತೆ ಈ ಚಾಮರಾಜರ ಮೃತ ದೇಹವನ್ನು ಬಿಸಾಡಲು ಅಲ್ಲಿಯ ಅಧಿಕಾರಿಗಳು ಒಪ್ಪಲಿಲ್ಲ. ಕಡೆಗೆ ಅನೇಕ ಸಮಾಲೋಚನೆಗಳ ನಂತರ ಆ ದೇಹವನ್ನು ಕೋಟೆಯ ಶ್ರೀರಂಗನಾಥ ಸ್ವಾಮಿಯ ಗುಡಿಯ ಬಳಿ ದಹನ ಮಾಡಲು ತೀರ್ಮಾನಿಸಲಾಯಿತು. ಬಹಳ ಕಷ್ಟದಿಂದ ಚಾಮರಾಜ ಒಡೆಯರ ಮೃತದೇಹವನ್ನು ಅಲ್ಲಿಗೆ ತಂದು ಕಾವಲುಗಾರರೇ ತಯಾರಿಸಿದ ಕಟ್ಟಿಗೆಯ ಚಟ್ಟದಲ್ಲಿ ಮಲಗಿಸಿ ನಂತರ ಮತ್ತೆ ಆ ಮೃತ ದೇಹವನ್ನು ಕಟ್ಟಿಗೆಗಳಿಂದ ಮುಚ್ಚಿದರು. ಆ ಕಡೆಗೆ ಮೂವರೂ ರಾಣಿಯರು ಅದಕ್ಕೆ ಅಗ್ನಿಸ್ಪರ್ಷ ಮಾಡು ಮುಖಾಂತರ ಅಂತ್ಯಕ್ರಿಯೆಯನ್ನು ನೆರೆವೇರಿಸಿದರು ಸಂಜೆ ರಾಣಿಯವರುಗಳನ್ನು ಕಬ್ಬಾಳು ಮೇಲಿನ ದುರ್ಗಕ್ಕೆ ಕರೆದುಕೊಂಡು ಹೋಗಲಾಯಿತು ಚಾಮರಾಜ ಒಡೆಯರ್ ರವರ ಮೃತದೇಹವನ್ನು ಸುಟ್ಟ ಮಾರನೆಯ ದಿನ ರಾಣಿಯರು ತಮ್ಮ ರಾಜನ ಭಸ್ಮವನ್ನು ಶೇಖರಿಸಲು ಕಾವಲುಗಾರರನ್ನು ಅನುಮತಿ ಕೇಳಿದಾಗ ಅವರುಗಳು ತಮ್ಮ ಮೇಲಿನ ಆಧಿಕಾರಗಳಿಗೆ ಈ ವಿಷಯವನ್ನು ತಿಳಿಸಿದಾಗ ಮತ್ತೆ ಅವರುಗಳು ಬಹಳ ಆಲೋಚಿಸಿ ತಕ್ಕ ಭದ್ರತೆಗಳನ್ನು ಮಾಡಿ ಇದಕ್ಕೆ ಅನುಮತಿ ನೀಡಲಾಯಿತು. ರಾಣಿಯರು ಮೇಲಿನ ದುರ್ಗದಿಂದ ಕೆಳಕ್ಕೆ ಚಾಮರಾಜ ಒಡೆಯರ್ ರವರ ದೇಹವನ್ನು ಸುಟ್ಟ ಸ್ಥಳಕ್ಕೆ ಕರೆದುಕೊಂಡು ಬಂದರು ಚಿತೆಯು ಇನ್ನು ಆರಿರಲಿಲ್ಲ. ಸ್ವಲ್ಪ ಹೊತ್ತು ಕಾದು ಕುಳಿತರು ರಾಣಿಯರ ದುಃಖ ಹೇಳಲು ಅಸಾಧ್ಯವಾಗಿತ್ತು ಸಂಜೆಯಾಗುತ್ತಿದ್ದಂತೆ ಕಾವಲುಗಾರರು ಮೃತರಾಜನ ಅಸ್ಥಿಯನ್ನು ಸಂಗ್ರಹಿಸಲು ರಾಣಿಯರಿಗೆ ಅನುಕೂಲ ಮಾಡಲು ಮುಂದಾದರೂ ಚಿತೆಯಲ್ಲಿ ಆಗಲೂ ಬೆಂಕಿ ಆರಿರಲಿಲ್ಲ. ಆದರೂ ಬಹಳ ಕಷ್ಟದಿಂದ ಅಸ್ಥಿಯನ್ನು ಸಂಗ್ರಹಿಸಲಾಯಿತು. ಆಗ ಮತ್ತೊಬ್ಬ ರಾಣಿಯು ಹತ್ತಿರದಲ್ಲಿ ಇದ್ದ ಮತ್ತೊಂದು ಬಾಂಡಲೆಯನ್ನು ತೆಗೆದುಕೊಂಡು ಅವರೂ ಸಹ ಅಸ್ಥಿಯನ್ನು ಸಂಗ್ರಹಿಸತೊಡಗಿದರು. ಇದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾದರೂ ಯಾರೂ ಏನೂ ಮಾತನಾಡಲಿಲ್ಲ. ಆ ಅಸ್ಥಯು ಸಂಗ್ರಹದಲ್ಲಿ ಉರಿಯುತ್ತಿದ್ದ/ ಕಾರುತ್ತಿದ್ದ ಕೆಂಡಗಳು ಇದ್ದವು. ಆ ಅಸ್ಥಿಯ ಬಾಂಡಲೆಯನ್ನು ಅಲ್ಲಿಯೇ ಇದ್ದ ಶ್ರೀ ರಂಗನಾಥಸ್ವಾಮಿಯ ಗುಡಿಗೆ ತೆಗೆದುಕೊಂಡು ಹೋಗಿ ಅದನನು ದೇವರ ಮುಂದೆ ಇಟ್ಟು ದೇವರಿಗೆ ನಮಸ್ಕರಿಸಿದಳು. ಇದನ್ನು ಬಹು ಎಚ್ಚರಿಕೆಯಿಂದ ಕಾವಲುಗಾರರು ಹಾಗೂ ಮಿಕ್ಕ ರಾಣಿಯರು ನೋಡುತ್ತಿದ್ದರು. ಈ ರಾಣಿಯು ಮಾಡುತ್ತಿದ್ದ ನಮಸ್ಕಾರವನ್ನು ನೋಡಿ ಮಿಕ್ಕ ರಾಣಿಯರೂ ಅಲ್ಲಿಗೆ ಮತ್ತೊಂದು ಅಸ್ಥಿ ಸಂಗ್ರಹಿಸಿದ ಬಾಂಡಲಿಯೊಂದಿಗೆ ಹೋಗಿ ಅಲ್ಲಿ ಅದನ್ನು ಇಟ್ಟು, ಅವರೂ ದೇವರಿಗೆ ನಮಸ್ಕರಿಸಿದರು. ನಂತರ ಮೊದಲು ದೇವರ ಬಳಿಗೆ ಅಸ್ಥಿಯನ್ನು ತಂದ ರಾಣಿಯು ತಾನು ತಂದಿದ್ದ ಅಸ್ಥಿಯ ಬಾಂಡಲಿಯನ್ನು ಎತ್ತಿಕೊಂಡು ಜೋರಾಗಿ ಅಳುತ್ತಾ, ಆ ಅಸ್ಥಿಯನ್ನು ದೇವರ ಮೇಲೆ ಸುರಿದಳು. ಇದರಿಂದ ಗಾಬರಿಯಾದ ಮಿಕ್ಕ ರಾಣಿಯರು ಹಾಗೂ ಕಾವಲುಗಾರರು ಏನನ್ನೂ ಮಾಡಲು ಸಾಧ್ಯವಾಗದೆ ಸುಮ್ಮನೆ ನಿಂತರು. ರಾಣಿಯರ ಆಕ್ರಂದನ ಹೆಚ್ಚಾಗಿತ್ತು. ಅವರನ್ನು ಅಲ್ಲಿಂದ ಸಮಾಧಾನ ಮಾಡಿ ಮತ್ತೆ ಮೇಲಿನ ದುರ್ಗಕ್ಕೆ ಕರೆದುಕೊಂಡು ಹೋಗಲು ಕಾವಲುಗಾರರು ಹಾಗೂ ಅವರ ಪತ್ನಿಯವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಚಾಮರಾಜ ಒಡೆಯರ್ ರವರು ಮರಣವಾದ 13ನೇ ದಿನ ಸಂಪ್ರಾದಾಯಕವಾಗಿ ವೈಕುಂಠ ಸಮಾರಾಧನೆಯನ್ನು ಮಾಡಬೇಕಾಗಿತ್ತು. ಅದಕ್ಕೆ ಅನುಕೂಲತೆಗಳೂ ಇಲ್ಲದಿದ್ದರೂ ಅಲ್ಲಿಯ ಕಾವಲುಗಾರರು ತಮ್ಮ ಕೈಯಲ್ಲಿ ಆದಷ್ಟೂ ಸಾಮಾನುಗಳನ್ನು ಕಂಡುಕಾಣದಂತೆ ತಂದು ಕೊಟ್ಟಿದ್ದರು. ರಾಣಿಯರು ಬೆಳಗಿನಿಂದ ಯಾವ ಊಟೋಪಚಾರವನ್ನು ಮಾಡದೇ, ಅಲ್ಲಿಯೇ ಇದ್ದ ಕೊಳದಲ್ಲಿ ಸ್ನಾನ ಮಾಡಿ ಸುಮ್ಮನೆ ಕುಳಿತಿದ್ದರು. ಮಧ್ಯಾಹ್ನ ಆಗುತ್ತಿದ್ದಂತೆ ಅಲ್ಲಿಯ ಪರಿಸ್ಥಿತಿಯನ್ನು ಕಂಡ ಕಾವಲುಗಾರರು ಅವರಿಗೆ ಸಮಾಧಾನ ಹೇಳಲು ಮುಂದೆ ಬಂದರು ಆಗ ಒಬ್ಬ ರಾಣಿಯವರು ತಮ್ಮನ್ನು ದುರ್ಗಾದಲ್ಲಿರುವ ರಂಗನಾಥ ಸ್ವಾಮಿ ಗುಡಿಯ ಬಳಿಗೆ ಕರೆದುಕೊಂಡು ಹೋಗಲು ಹೇಳಿದರು. ಹಾಗೆಯೇ ಕರೆದುಕೊಂಡು ಹೋದಾಗ ಶ್ರೀ ರಂಗನಾಥಸ್ವಾಮಿಯನ್ನು ತೊಳೆದು ಶುದ್ದಪಡಿಸಿದ್ದರಲ್ಲದೇ ಬೆಳಗ್ಗೆ ದೇವರ ಪೂಜೆ ನಡೆದು ನಂದಾ ದೀಪ ಉರಿಯುತ್ತಿತ್ತು. ಸಂಜೆಯವರೆಗೆ ದೇವರ ಮುಂದೆ ರಾಣಿಯರು ದುಃಖ ತಪ್ತರಾಗಿ ಕುಳಿತಿದ್ದರು ಹಾಗೆಯೇ ರಾಣಿಯರ ಸೆರೆವಾಸ ಅಲ್ಲಿಯೇ ಮುಂದುವರೆಯಿತು. ಚಾಮರಾಜ ಒಡೆಯರ್ ರವರು ವಾರ್ಷಿಕ ದಿನ ಬರಲಾಗಿ ಮತ್ತೆ ರಾಣಿಯರಿಗೆ ಅವರ ಶ್ರಾದ್ದವನ್ನು ಮಾಡಲು ಅವಕಾಶವಿಲ್ಲದೇ ಶ್ರೀ ರಂಗನಾಥ ಸ್ವಾಮಿಯ ಗುಡಿಗೆ ಹೋಗಿ ಹಿಂದಿನ ವರ್ಷ ಮಾಡಿದಂತೆ ಕೆಂಡವನ್ನು ದೇವರ ತಲೆಯ ಮೇಲೆ ಸುರಿದರು, ಅವರುಗಳು ಇರುವವರೆಗೆ ಈ ಪದ್ದತಿಯನ್ನು ಮುಂದುವರೆಸಿದರು ಮುಂದೆ ಚಾಮರಾಜ ಒಡೆಯರ್ ರವರ ಮೊದಲ ಪತ್ನಿ ಯಾವಾಗ ಮರಣ ಹೊಂದಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲವಾಗಿದೆ. ಮುಂದೆ ಕೆಲವು ಕಾಲದ ನಂತರ ಚಾಮರಾಜ ಒಡೆಯರ್ ರವರ ಎರಡನೇ ಪತ್ನಿಯಾದ ಶೂಲಗಿರಿ ನಂಜರಾಜನ ಕುಮಾರ್ತಿಯಾದ ದೇವಾಜಮ್ಮಣ್ಣಿಯವರು ಮರಣವನ್ನು ಅಪ್ಪಿದ್ದರು. ಈಗ ಕಬ್ಬಾಳು ಕೋಟೆಯಲ್ಲಿ ಚಾಮರಾಜ ಒಡೆಯರ್‍ರವರ ಮೂರನೇಯ ಪತ್ನಿಯಾದ ಮೂಗೂರು ಅಳಗಂಜಿ ಬಾಳಯ್ಯನವರ ಕುಮಾರ್ತಿ ದೇವಜಮ್ಮಣ್ಣಿಯವರೂ ಒಬ್ಬರೇ ಉಳಿದರು. ಆ ವೇಳೆಗೆ ಶ್ರೀ ರಂಗಪಟ್ಟಣದ ಅರಮನೆಯ ವಾತಾವರಣದಲ್ಲಿ ಚಾಮರಾಜ ಒಡೆಯರ್‍ರವರ ವಿಷಯವನ್ನು ಮರೆತಿದ್ದರು. ಅಲ್ಲದೆ ಅವರ ಮೂರನೇಯ ಪತ್ನಿಯೂ ಅನುಸರಿಸಬಹುದಾದ ರಾಜಕಾರಣಗಳ ಬಗ್ಗೆ ಹೆಚ್ಚು ಮುಂಜಾಗ್ರತೆಯನ್ನು ಅನುಸರಿಸುವ ಕ್ರಮಬೇಕಾಗಿರಲಿಲ್ಲ. ಆದ್ದರಿಂದ ಚಾಮರಾಜ ಒಡೆಯರ್‍ರವರ ಮೂರನೇ ಪತ್ನಿಯಾದ ಮೂಗೂರು ಅಳಗಂಜಿ ಬಾಳಯ್ಯನವರ ಕುಮಾರ್ತಿ ದೇವಜಮ್ಮಣ್ಣಿಯವರನ್ನು ಕಬ್ಬಾಳ ದುರ್ಗದಿಂದ ಬೇರೆ ಕಡೆಗೆ ಬದಲಾಯಿಸಲು ಅನುಮತಿ ಕೇಳಲಾಯಿತು. ಈ ವಿಷಯವನ್ನು ಚರ್ಚಿಸಿದ ಶ್ರೀರಂಗಪಟ್ಟಣದ ರಾಜ್ಯದ ಮುಖ್ಯಸ್ಥರು ಅವರನ್ನು ಕಬ್ಬಾಳ ದುರ್ಗಕ್ಕೆ ಹತ್ತಿರದಲ್ಲಿಯೇ ಇದ್ದ ಬಸವನ ಬೆಟ್ಟದ ಕೆಳಗೆ ಇರುವ ಹರಿಹರ (ಕನಕಪುರ ತಾಲ್ಲೂಕಿನಲ್ಲಿರುವ ಸಾತನೂರು ಹತ್ತಿರದಲ್ಲಿರುವ ಒಂದು ಗ್ರಾಮ) ಎಂಬ ಗ್ರಾಮದ ಕೋಟೆಯಲ್ಲಿ ಸೆರೆಹಿಡಲು ತೀರ್ಮಾನಿಸಿದರು. ಅದರಂತೆ ಚಾಮರಾಜ ಒಡೆಯರ್‍ರವರ ಮೂರನೇ ಪತ್ನಿಯಾದ ಮೂಗೂರು ಅಳಗಂಜಿ ಬಾಳಯ್ಯನವರ ಕುಮಾರ್ತಿ ದೇವಜಮ್ಮಣ್ಣಿಯವರನ್ನು ಕಬ್ಬಾಳ ದುರ್ಗದಿಂದ ಹರಿಹರ ಕೋಟೆಗೆ ವರ್ಗಾಯಿಸಲಾಯಿತು. ಅವರು ಕಬ್ಬಾಳದಿಂದ ಹೋಗುವಾಗ ತಾವು ಪೂಜಿಸುತ್ತಿದ್ದ ಕಾಳಿಕಾದೇವಿಯ ಮರದ ವಿಗ್ರಹವನ್ನು ಮಾತ್ರ ತೆಗೆದುಕೊಂಡು ಹೋದರೆ ಹೊರೆತು ಮಿಕ್ಕ ಪದಾರ್ಥಗಳನ್ನು ಅಲ್ಲ, ಅಂದರೆ ಚಾಮರಾಜ ಒಡೆಯರ್‍ರವರು ಹಾಗೂ ಅವರ ಪತ್ನಿಯಾದ ಶೂಲಗಿರಿ ನಂಜರಾಜನ ಕುಮಾರ್ತಿಯಾದ ದೇವಾಜಮ್ಮಣ್ಣಿಯವರು ಪೂಜಿಸುತ್ತಿದ್ದ ಮೈಸೂರು ಅರಮನೆಯ ಪ್ರಾಚೀನ ವಿಗ್ರಹವನ್ನು ತೆಗೆದುಕೊಂಡು ಹೋಗಲಿಲ್ಲ. ಮುಂದೆ ಕಬ್ಬಾಳ ಕೋಟೆಯಲ್ಲಿದ್ದ ಆ ರಾಣಿಯರ ಉಳಿದ ವಸ್ತುಗಳು ಹಾಗೂ ಈ ವಿಗ್ರಹದ ಬಗ್ಗೆ ಮಾಹಿತಿ ಇಲ್ಲವಾಗಿರುತ್ತದೆ.

ಶ್ರೀ ರಂಗನಾಥ ಸ್ವಾಮಿಯ ಮೇಲೆ ಕೆಂಡ ಸುರಿಯುವ ಪದ್ದತಿಯನ್ನು ಕೇಳಿದ್ದ ಹಿಂದಿನ ಕಬ್ಬಾಳ ಗ್ರಾಮದ ಕೆಲವು ಗ್ರಾಮಸ್ಥರು ಅವರು ಅದನ್ನು ಜಾತ್ರೆಯ ವೇಳೆಯಲ್ಲಿ ಮಾಡಲು ನಿರ್ಧರಿಸಿ ಅದನ್ನು ಮುಂದುವರಿಸಿದ್ದರು, ಈಗಲೀ ಶ್ರೀ ರಂಗನಾಥಸ್ವಾಮಿಯ ತಲೆಯ ಮೇಲೆ ಜಾತ್ರೆಯ ವೇಳೆಯಲ್ಲಿ ಕೆಂಡಸುರಿಯುವ ಪದ್ದತಿ ಜಾರಿಯಲ್ಲಿದೆ.

4ಶೂಲ್ಗಿರಿ ನಂಜರಾಜ ಶ್ರೀ ಕಾಳಿಕದೇವಿಯ ವಿಗ್ರಹವನ್ನು ಪೂಜಿಸಿದರು
ಚಾಮರಾಜ ಒಡೆಯರ್‍ರವರು ಹಾಗೂ ಅವರ ಪತ್ನಿಯಾದ ಶೂಲಗಿರಿ ನಂಜರಾಜನ ಕುಮಾರ್ತಿಯಾದ ದೇವಾಜಮ್ಮಣ್ಣಿಯವರು ಈ ಕಾಳಿಕಾ ವಿಗ್ರಹಕ್ಕೆ ತಮ್ಮ ತನುಮನವನ್ನು ನೀಡಿ ಪೂಜೆ ಮಾಡಿತ್ತಿದ್ದ ಕಾರಣದಿಂದ, ಈ ಕಾಳಿಕಾದೇವಿಯು ಈ ಭಕ್ತರ ಅಂದರೆ ರಾಣಿಯರು ಆಪೇಕ್ಷಿಸಿದ ಫಲವನ್ನು ದೇವಿಯು ಅನುಗ್ರಹಿಸಿದ್ದರಿಂದ ಕಳಲೆ ನಂಜರಾಜಯ್ಯ ಮತ್ತು ದೇವರಾಜಯ್ಯ ಎಂಬುವರಿಗೆ ತೊಂದರೆ ತಟ್ಟಿರುತ್ತದೆ. ಎಂಬುವುದು ಸಾರ್ವಜನಿಕರ ಮಾತು ರಾಣಿಯರು ದೇವಿಯರನ್ನು ಅಪೇಕ್ಷಿಸಿ ಅವರುಗಳಿಗೆ ಶಾಪವನ್ನು ನೀಡಿದ್ದರಿಂದ ಮುಂದೆ ಅದು ಫಲಿಸಿ, ಅವರುಗಳಲ್ಲಿಯೇ ಒಬ್ಬರಿಗೊಬ್ಬರು ದ್ವೇಷಿಸುವಂತೆ ಆಗಿ, ಕೆಲವೇ ದಿನಗಳಲ್ಲಿ ಅವರು ತಮ್ಮ ಕೀರ್ತಿಯನ್ನು ಕಳೆದುಕೊಂಡರು.

ಚಾಮರಾಜ ಒಡೆಯರ್‍ರವರ ಮೂರನೇ ಪತ್ನಿಯಾದ ಮೂಗೂರು ಅಳಗಂಜಿ ಬಾಳಯ್ಯನವರ ಕುಮಾರ್ತಿ ದೇವಜಮ್ಮಣ್ಣಿಯವರನ್ನು ಹರಿಹರ ಗ್ರಾಮಕ್ಕೆ ಬಂಧಿಯಾಗಿ ಕರೆದುಕೊಂಡು ಹೋಗಿ ಅಲ್ಲಿ ಕೋಟೆಯಲ್ಲಿ ಇದ್ದ ಹಿಂದಿನ ಸಿಗಲನಾಡು ಅರಸನ ಅರಮನೆಯಲ್ಲಿ ಇಟ್ಟಿದ್ದರು. ಈ ಹರಿಹರ ಗ್ರಾಮವು ಹಿಂದೆಯೇ ಹೇಳಿದಂತೆ ಬಸವನ ಬೆಟ್ಟ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಒಂದು ಗ್ರಾಮವಾಗಿದೆ. ಇಲ್ಲಿಯ ಸಿಗಲನಾಡ ಪ್ರಭುಗಳು ವಿಜಯನಗರದ ಅಚ್ಚುಮೆಚ್ಚಿನ ಒಬ್ಬ ಸಾಮಂತರಾಗಿದ್ದರು. ವಿಜಯನಗರದ ಹರಿಹರ ಪ್ರೌಢರಾಯರಿಗೆ ಆನೆಯ ಬೇಟೆಯ ಹುಚ್ಚು ಬಹಳ, ಅವರು ಅದನ್ನು ಹಿಡಿದು ಪಳಗಿಸಿ ತಮ್ಮ ಸೈನ್ಯಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದರು. ಹೀಗೆ ಆನೆಯ ಭೇಟೆಯ ಬಗ್ಗೆ ಪ್ರೌಢರಾಯನು ಸಿಗಲ ನಾಡಿಗೆ ಬಂದಾಗ ಅವನು ಕುಪ್ಪೆದೊಡ್ಡಿಯ ಬಳಿ ಹೊಸದಾಗಿ ನಿರ್ಮಾಣವಾಗಿದ್ದ ಈ ಕೋಟೆಯಲ್ಲಿ ವ್ಯಾಸ್ತವ್ಯ ಮಾಡಿದ್ದರಿಂದ ಈ ಕೋಟೆಗೆ ಹರಿಹರ ಕೋಟೆ ಎಂದು ಹೆಸರು ಬಂದಿತು. ವಿಜಯನಗರದ ಹರಿಹರ ಪ್ರೌಢರಾಯರು ಈ ಗ್ರಾಮಕ್ಕೆ ಬಂದಾಗ ಅವನು ಇಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಲು ಹಣವನ್ನು ಮಂಜೂರು ಮಾಡಿದ್ದನು. ಈ ಹಣದಿಂದ ಸಿಗಲ ನಾಡಿ ಪ್ರಭುಗಳು ಒಂದು ಶಿವನ(ಹರಿಹರನ) ದೇವಸ್ಥಾನವನ್ನು ಕಟ್ಟಿಸಿದರು. ಅಲ್ಲದೇ ಶಿವನ ಲಿಂಗವನ್ನು ಪ್ರತಿಷ್ಠಾಪನೆ ಮಾಡುವ ವೇಳೆಯಲ್ಲಿ ಅಪರೂಪವಾದ ಅಕ್ಷಮಾಲ ಗಣಪತಿ, ದುರ್ಗೆಯರ ಪ್ರತಿಮೆಗಳನ್ನು ಸ್ಥಾಪಿಸಿದರು ಈಗ ಗಣಪತಿ ದುರ್ಗೆಯರ ಮೂರ್ತಿಯರ ವಿಗ್ರಹಗಳು ಭಗ್ನವಾಗಿವೆ. ಬಸವನಮೂರ್ತಿಯನ್ನು ದೇವಾಲಯದ ಹೊರಭಾಗದಲ್ಲಿ ತಂದು ಇಟ್ಟಿರುತ್ತಾರೆ. ಈ ಬಸವನು ಮೂರ್ತಿಯ ಬಳಿ ಅನೇಕ ಭಗ್ನ ವಿಗ್ರಹಗಳು ಇವೆ. ಅವುಗಳಲ್ಲಿ ಬ್ರಹ್ಮ ರಾಕ್ಷಸನ ತಲೆ, ಒಂದು ದುರ್ಗೆಯ ವಿಗ್ರಹವೂ ಸಹ ಸುಂದರವಾಗಿದೆ. ಮೂರ್ತಿಯ ಮುಖ ಭಾಗ ಒಡೆದಿದೆ. ದೇವಿಯ ಕೈಗಳಲ್ಲಿ ಡಮರುಗ, ಕತ್ತಿ. ತ್ರಿಶೂಲ ಮತ್ತು ಪಾನ ಪಾತ್ರೆಗಳನ್ನು ಹಿಡಿದಿರುತ್ತಾಳೆ. ಈ ದೇವಸ್ಥಾನದ ಶಿವಲಿಂಗವನ್ನು ಬೇರೆಯ ಕಡೆ ಪ್ರತಿಷ್ಠಾಪಿಸಲಾಗಿದೆಯೆಂದು ಹೇಳಲಾಗುತ್ತಿದೆ. ಈ ಕಓಟೆಯ ಪಕ್ಕದಲ್ಲಿ ಬಸವನ ಬೆಟ್ಟಕ್ಕೆ ಹೋಗಬಹುದಾದ ಕಾಡು ಹಾದಿ ಇದೆ. ಈ ದೇವಸ್ಥಾನದ ಪಕ್ಕದಲ್ಲಿರುವ ಕೆರೆಯ ಬಂಡೆಯ ಮೇಲೆ ಬಸವನ ಬೆಟ್ಟದ ದೇವತೆಯಾದ ಹೆಬ್ಬೆಟ್ಟುರಾಯಪ್ಪನ ಪದವಿದೆ. ಹಿಂದೆ ಈ ಹೆಬ್ಬೆಟ್ಟುರಾಯನ ದೇವಸ್ಥಾನಕ್ಕೆ ಹೋಗುವ ಭಕ್ತರು ಈ ಕೆರೆಯಲ್ಲಿ ಸ್ನಾನ ಮಾಡಿ ಕೆರೆಯ ಬಂಡೆಯ ಮೇಲಿರುವ ಕಲ್ಲು ಹಾವುಎಯ ಪಾದಕ್ಕೆ ನಮಸ್ಕರಿಸಿ ಬೆಟ್ಟವನ್ನು ಹತ್ತುತ್ತಿದ್ದರು. ಈ ಹರಿಹರ ಗ್ರಾಮದಲ್ಲಿ ಪಾಳು ಹರಿಹರನ ದೇವಸ್ಥಾನವಲ್ಲದೆ ಜೈನಧರ್ಮದ ತೀರ್ಥಂಕರ ಮೂರ್ತಿಗಳು ಇವೆ. ಈ ಪ್ರದೇಶಕ್ಕೆ ಶ್ರವಣನ ಒಡ್ಡು ಎಂದು ಕರೆಯುತ್ತಾರೆ.

5ರಾಣಿ ದೇವಜಾಮ್ಮನ್ನಿ
ಚಾಮರಾಜ ಒಡೆಯರ್‍ರವರ ಮೂರನೇ ಪತ್ನಿಯಾದ ಮೂಗೂರು ಅಳಗಂಜಿ ಬಾಳಯ್ಯನವರ ಕುಮಾರ್ತಿ ದೇವಜಮ್ಮಣ್ಣಿಯವರನ್ನು ಹರಿಹರ ಗ್ರಾಮಕ್ಕೆ ಬಂದಿಯಾಗಿ ಬಂದು ತಮ್ಮ ಕಡೆಯ ದಿನಗಳನ್ನು ಇಲ್ಲಿ ಬಂದಿಯಾಗಿಯೇ ಕಳೆದು ಮರಣಹೊಂದಿದ್ದರು. ಈಗ ಕೋಟೆ ಎಂದು ಕರೆಯಿಸಿಕೊಳ್ಳುವ ಸ್ಥಳದಲ್ಲಿ ಇದ್ದ ಕೋಟೆಯು ಹಾಳಾಗಿದೆ. ಆದರೆ ಅಲ್ಲಿ ಮೈಸೂರು ಚಾಮರಾಜ ಒಡೆಯರ್‍ರವರ ಮೂರನೇ ಪತ್ನಿಯಾದ ಮೂಗೂರು ಅಳಗಂಜಿ ಬಾಳಯ್ಯನವರ ಕುಮಾರ್ತಿ ದೇವಜಮ್ಮಣ್ಣಿಯವರು ಬಿಟ್ಟು ಹೋದ ಹೊನ್ನೆಮರದ ಕಾಳಿಕಾದೇವಿಯ ವಿಗ್ರಹವಿದೆ. ಇದನ್ನು ಗ್ರಾಮದ ಜನರು ಮಾರಮ್ಮ ಎಂದು ಕರೆಯುತ್ತಾರೆ. ಹಿಂದೆ ಈ ಗ್ರಾಮದ ದೇವತೆಯಾದ ಕೊಂತಮಾರಮ್ಮನ ವಿಗ್ರಹವೂ ಈ ಕಾಳಿಕಾದೇವಿಯ ವಿಗ್ರಹದ ಪಕ್ಕದಲ್ಲಿದೆ.

ಕ್ರಿ.ಶ 1759 ರಲ್ಲಿ ಗೋಪಾಲ ಹರಿಯ ಮುಖಂಡತ್ವದಲ್ಲಿ ಮರಾಠಾ ಸೇನೆಯು ಚನ್ನಪಟ್ಟಣ ಸೀಮೆಯ ಪ್ರದೇಶದ ಮೇಲೆ ದಾಳಿ ಮಾಡಿ ಅನೇಕ ಪ್ರದೇಶಗಳನ್ನು ಹಾಗೂ ದುರ್ಗಗಳನ್ನು ನಾಶಪಡಿಸಿದರು. ಈ ದುರ್ಗಗಳಲ್ಲಿ ಕಬ್ಬಾಳು ದುರ್ಗವೂ ಸಹ ಒಂದಾಗಿತ್ತು.

ಇದಾದ sಸ್ಪಲ್ಪ ದಿನಗಳ ನಂತರ ಕಬ್ಬಾಳು ಗ್ರಾಮದ ಒಬ್ಬ ರೈತ ಬಂದು, ಆ ಗ್ರಾಮದ ಯಜಮಾನರಾಗಿದ ಹಾಗೂ ಬ್ರಾಹ್ಮಣರಲ್ಲಿ ಮುಖ್ಯರಾದ ಶ್ರೀ ರಾಮಯ್ಯನವರನ್ನು ಭೇಟಿ ಮಾಡಿ, ತಾನು ತನ್ನ ಮನೆಯಲ್ಲಿರುವ ಕೋಳಿಗಳಿಗೆ ಹುತ್ತದ ಮಣ್ಣನ್ನು ಅಗೆಯುವ ವೇಳೆಯಲ್ಲಿ ತನಗೆ ಅಲ್ಲಿ ಒಂದು ವಿಗ್ರಹವು ಕಾಣಿಸಿತೆಂದೂ ಹೇಳಿದನು. ಕೂಡಲೇ ರಾಮಯ್ಯನವರು ಆ ಹುತ್ತದ ಸ್ಥಳಕ್ಕೆ ಹೋಗಿ ಅಲ್ಲಿ ನೋಡಿದಾಗ ಅವರಿಗೆ ವಿಗ್ರಹದ ಒಂದು ಭಾಗವು ಕಾಣಿಸಿತು. ನಂತರ ಅವರು ಆ ಹುತ್ತವನ್ನು ಮತ್ತೆ ಅಗೆಸಿದಾಗ ಅವರಿಗೆ ಆ ಹುತ್ತದ ಭೂಮಿಯಲ್ಲಿ ಒಂದು ಸ್ರ್ತೀ ದೇವರ ವಿಗ್ರಹವು ಸಿಕ್ಕಿತು. ಅವರು ಆ ವಿಗ್ರಹವನ್ನು ತಂದು ಆ ದೇವರ ವಿಗ್ರಹಕ್ಕೆ ಒಂದು ದೇವಸ್ಥಾನವನ್ನೂ ಕಟ್ಟಿಸಿದರು. ಮುಂದೆ ಅವರು ಆ ದೇವರ ವಿಗ್ರಹವನ್ನು ತಾವು ಕಟ್ಟಿದ ದೇವಸ್ಥಾನದಲಲಿ ಪ್ರತಿಷ್ಠಾಪಿಸಿ, ನಿತ್ಯ ಪೂಜೆ ಪುನಸ್ಕಾರಗಳನ್ನು ಹವನ ಹೋಮಾದಿಗಳನ್ನು ಮಾಡತೊಡಗಿದರು.

ಮುಂದೆ ಕಬ್ಬಾಳು ದುರ್ಗವನ್ನು ಮೈಸೂರಿನ ಅರಸರು ಹಾಗೂ ಹೈದರಾಲಿಖಾನ್ ಕಾಲಕ್ಕೆ ತಕ್ಕಂತೆ ನಡೆಯುವ ಯುದ್ದ ಹೋರಾಟವನ್ನು ಗಮನಿಸಿ ಅದನ್ನು ದುರಸ್ಥಿಗೊಳಿಸಿದರು ಎಂದು ಚರಿತ್ರೆಯು ಹೇಳುತ್ತದೆ. ಹೈದರಾಲಿ ಈ ಕೋಟೆಯನ್ನು ದುರಸ್ತಿಗೊಳಿಸಿದ ನಂತರ ಇದಕ್ಕೆ ಜಫರಾಬಾದ್ ಎಂದು ಹೆಸರಿಟ್ಟಿದ್ದ ಆದರೆ ಇಂದು ಯಾರು ಆ ಹೆಸರಿನಿಂದ ಕರೆಯುವುದಿಲ್ಲ ಕ್ರಿ.ಶ. 1864 ರಲ್ಲಿ ಇಲ್ಲಿಯ ಫಿರಂಗಿಗಳನ್ನು ಮದ್ದನ್ನೂ ನಾಶಗೊಳಿಸಲಾಯಿತಲ್ಲದೆ ಇಲ್ಲಿದ್ದ ಸಿಬ್ಬಂದಿಯನ್ನು ಸ್ಥಳಾಂತರಗೊಳಿಸಲಾಯಿತು.

6ಕಬ್ಬಲು-ಜಾತ್ರೆ ಪ್ರಾರಂಭಿಸಿದರು
ಈ ಪ್ರದೇಶವನ್ನು ಆಳುತ್ತಿದ್ದ ವಿವಿಧ ಆಡಳಿತಗಾರರೂ ಮುಮ್ಮುಡಿ ಕೃಷ್ಣರಾಜ ಒಡೆಯರ್ ಸರ್ಕಾರದವರು ಅಪಾಯಕಾರಿಗಳಾದ ರಾಜದ್ರೋಹಿಗಳನ್ನು ಇಲ್ಲಿ ಇಡುತ್ತಿದ್ದರು. ಇಲ್ಲಿ ನೀರು ಕೂಡ ವಿಷವೆಂದು ಪರಿಗಣಿಸಲಾಗಿತ್ತು. ಅಹಿತಕರ ವಾತಾವರಣವೂ ಅತೃಪ್ತಿಕರ ಆಹಾರವೂ ಖೈದಿಯ ಬಂಧನದ ನೋವಿನ ಅವಧಿಯನ್ನು ಮೊಟಕುಮಾಡಿ ಬೇಗ ಅವನನ್ನು ಪರಲೋಕಕ್ಕೆ ಅಟ್ಟುತ್ತಿತ್ತೆಂದು ಕರ್ನಲ್ ವಿಲ್ಕಿಸ್ ಬರೆದಿದ್ದಾರೆ.

ಕಬ್ಬಾಳಮ್ಮನ ಪೂಜೆಯನ್ನು ಪ್ರಾರಂಭಿಸಿದ ನಂತರ ರಾಮಯ್ಯನವರು ಈ ವಿಗ್ರಹ ಸಿಕ್ಕಿದ ದಿನವನ್ನು ಜ್ಞಾಪಿಸಿಕೊಳ್ಳುವ ಉದ್ದೇಶದಿಂದ ಪ್ರತಿ ವರ್ಷ ಜಾತ್ರೆಯನ್ನು ಆರಂಭಿಸಿದರು. ಈ ಜಾತ್ರೆಯನ್ನು ಉದ್ದೇಶಪೂರ್ವಕವಾಗಿ ಅಷ್ಟ ದಿನಗಳು ನಡೆಯುವಂತೆ ಏರ್ಪಡಿಸಿ ಪ್ರತಿದಿನದ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದರಂತೆ ಪೂಜಾಕೈಂಕರ್ಯ ಮಾಡತೊಡಗಿದರು. ಅವರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ಅವರು ಮೈಸೂರು ಅರಸರು ನಡೆಸುವ ದಸರ ನವರಾತ್ರಿ ಹಬ್ಬವನ್ನು ಜ್ಞಾಪಿಸಿಕೊಂಡು ಅದರಂತೆ ಕಾರ್ಯಕ್ರಮಗಳನ್ನು ರೂಪಿಸತೊಡಗಿದರು. ಆದರೆ ಅದು ಕ್ರಮೇಣ ಸಾಕಷ್ಟು ಬದಲಾಗಿರುತ್ತೆ.

ಈಗ ಪ್ರತಿವರ್ಷ ಮಾಘ ಮಾಶದ ಕಡೆಯ ವಾರದಂದು ಗ್ರಾಮದ ಜನರು ಜಾತ್ರೆಗೆ ಮೊದಲು ತಮ್ಮ ಮನೆಗಳಿಗೆ ಸುಣ್ಣ ಬಣ್ಣ ಹೊಡೆದು / ಹೊಡೆಸಿ, ಶುದ್ದ ಪಡಿಸಿದ ನಂತರ ಮನೆಗೆ ಹಾಗೂ ಅಗತ್ಯ ರಸ್ತೆಯಲ್ಲಿ/ಮಂಟಪಗಳಲ್ಲಿ ತಳಿರು ತೋರಣ ಕಟ್ಟೆ ಜಾತ್ರೆಗೆ ಸಿದ್ದತೆ ನಡೆಸುತ್ತಾರೆ.